ದೇಶವಿದ್ರೋಹಿ ಶಕ್ತಿಗಳು ರಾಜಧಾನಿಯನ್ನು ದೆಹಲಿಯನ್ನು ಗುರಿಯಾಗಿಸಿಕೊಂಡು ಮತ್ತೊಮ್ಮೆ ವಿಧ್ವಂಸಕ ಕೃತ್ಯ ಎಸಗಿವೆ. ವಿದ್ರೋಹಿಗಳು ಭಾರೀ ಪ್ರಮಾಣದ ಸ್ಫೋಟಕ ಸಂಗ್ರಹಿಸಿ ದೇಶದ ಆಯಕಟ್ಟಿನ ಸ್ಥಳಗಳಲ್ಲಿ ಪ್ರಮುಖ ದಿನಗಳಂದು ಹಿಂಸಾಕೃತ್ಯ ಎಸಗಲು ಮುಂದಾಗಿದ್ದಾರೆನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಎಂದಿನಂತೆ ಈ ಸ್ಫೋಟ ಘಟನೆಯಲ್ಲೂ ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಜೈಶೆ ಮೊಹಮ್ಮದ್ ಹೆಸರು ಕೇಳಿ ಬಂದಿದೆ. ಆದರೆ ಈ ಬಾರಿ ಬಂಧಿತರು ಸಾಮಾನ್ಯರಲ್ಲ.
ಜನರ ಜೀವ ಉಳಿಸಬೇಕಾದ ವೈದ್ಯರು ಧರ್ಮದ ಅಫೀಮು ತುಂಬಿಕೊಂಡು ಸಾಮೂಹಿಕ ವಿನಾಶದ ಕೃತ್ಯಕ್ಕೆ ಮುಂದಾಗಿರುವುದು ಆಘಾತಕಾರಿ ಸಂಗತಿ. ಈವರೆಗೆ ಉಗ್ರಗಾಮಿ ಸಂಘಟನೆಗಳು ಅಮಾಯಕರ ದಾರಿ ತಪ್ಪಿಸಿ ವಿಧ್ವಂಸಕ ಕೃತ್ಯಕ್ಕೆ ಬಳಸುತ್ತವೆ ಎಂದು ಹೇಳಲಾಗುತ್ತಿತ್ತು. ಈಗ ವೈದ್ಯ ವೃತ್ತಿಯಲ್ಲಿ ತೊಡಗಿದ ಅತ್ಯಂತ ಸುಶಿಕ್ಷಿತ ವರ್ಗದಲ್ಲೂ ಈ ಸಂಘಟನೆಗಳು ಧರ್ಮದ ಹೆಸರಿನಲ್ಲಿ ವಿಷ ಬೀಜ ತುಂಬಲು ಯಶಸ್ವಿಯಾಗಿವೆ.
ಇದನ್ನೂ ಓದಿ: Vishwavani Editorial: ದುರುಳರ ಹೆಡೆಮುರಿ ಕಟ್ಟಿ
ಫರಿದಾ ಬಾದ್‌ನ ಅಲ್ ಫಲಾಹ್ ವಿವಿಯಲ್ಲಿ ಭವಿಷ್ಯದ ವೈದ್ಯ ವಿದ್ಯಾರ್ಥಿಗಳನ್ನು ರೂಪಿಸ ಬೇಕಾದ ಪ್ರೊಫೆಸರ್‌ಗಳು ತಮ್ಮ ವೃತ್ತಿಗೆ ಸಂಪೂರ್ಣವಾಗಿ ವಿರುದ್ಧವಾದ ‘ಜೀವ ತೆಗೆಯುವ’ ಕೆಲಸಕ್ಕೆ ಸಂಚು ರೂಪಿಸಿದ್ದು ಕಳವಳಕಾರಿ ಸಂಗತಿ. ಶಿಕ್ಷಣವು ಭಯೋ ತ್ಪಾದನೆಯ ವಿರುದ್ಧದ ಖಾತರಿ ಅಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ. ಮೂಲಭೂತ ವಾದವು ವೃತ್ತಿಪರ ಮಟ್ಟವನ್ನು ತಲುಪಿದ್ದು, ಉನ್ನತ ಹಿನ್ನೆಲೆಯುಳ್ಳ ಜನರೂ ಕೂಡ ಗುಪ್ತವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಇದು ನಮ್ಮ ಭದ್ರತಾಪಡೆಗಳಿಗೆ ಹೊಸ ಸವಾಲು.
ಕಾಶ್ಮೀರದಲ್ಲಿನ ಒಂದು ಸಣ್ಣ ಪೋಸ್ಟರ್‌ನಿಂದ ಪ್ರಾರಂಭವಾದ ತನಿಖೆಯು ಫರಿದಾಬಾದ್ ನಲ್ಲಿನ ಉಗ್ರರ ದೊಡ್ಡ ಸಂಚನ್ನು ಪತ್ತೆಹಚ್ಚಲು ಕಾರಣವಾಗಿದೆ. ಉಗ್ರರ ದಾಳಿಗಳನ್ನು ತಡೆಯಬೇಕಾದರೆ ಇಂತಹ ಪ್ರತಿಯೊಂದು ಸುಳಿವನ್ನೂ ಬೆನ್ನಟ್ಟಲೇ ಬೇಕಾಗಿದೆ.
ಅಕ್ರಮ ಶಸ್ತ್ರಾಸ್ತ್ರಗಳ ಸಾಗಣೆ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಗಡಿ ಸಮನ್ವಯ ವನ್ನು ಬಲಪಡಿಸಬೇಕಿದೆ. ಧರ್ಮದ ಹೆಸರಿನಲ್ಲಿ ಯುವಕರನ್ನು ದುರ್ಮಾರ್ಗಕ್ಕೆ ಪ್ರೇರೇ ಪಿಸುವ ಝಕೀರ್ ನಾಯ್ಕ್ ನಂತಹ ಧರ್ಮಗುರುಗಳನ್ನು ಪತ್ತೆ ಹಚ್ಚಿ ಶಿಕ್ಷಿಸ ಬೇಕಾಗಿದೆ. ಮಕ್ಕಳು ಶಿಕ್ಷಣದಲ್ಲಿ ಹೆಸರಿನಲ್ಲಿ ಜೀವಘಾತಕ ಮನೋಭಾವ ರೂಢಿಸಿಕೊಳ್ಳ ದಂತೆ ಪೋಷಕರು ಎಚ್ಚರಿಕೆ ವಹಿಸಬೇಕು.