ರಾಜ್ಯದ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ದ್ವೆವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಎನ್ಡಿಎ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ಫಲಿತಾಂಶದ ಹಾಗೂ ಗೆದ್ದ ಹುದ್ದರಿಗಳ ವಿಚಾರ ಹಾಗಿರಲಿ, ಚುನಾವಣೆ ನಡೆದಿರುವುದು ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ. ಈ ಕ್ಷೇತ್ರಗಳನ್ನು ಸಾಮಾನ್ಯವಾಗಿ ಪ್ರಜ್ಞಾವಂತರ ಕ್ಷೇತ್ರಗಳು ಎನ್ನಲಾಗುತ್ತದೆ. ಆದರೆ ಈ ಕ್ಷೇತ್ರಗಳಲ್ಲೇ ದಾಖಲೆ ಪ್ರಮಾಣದ ಕುಲಗೆಟ್ಟ ಮತಗಳು ಬಿದ್ದಿರುವುದು ಒಂದು ಸೋಜಿಗ.
ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ 34,051 (ಶೇಕಡ 13.14) ಮತಗಳು ತಿರಸ್ಕೃತಗೊಂಡಿವೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 20,076 ಮತಗಳು ಅಸಿಂಧುಗೊಂಡಿದ್ದು, ಈ ಮತಗಳೇ ಮೂರನೇ ಸ್ಥಾನದಲ್ಲಿವೆ. ಚಿಂತಕರ ಚಾವಡಿ, ಮೇಧಾವಿಗಳ ಮನೆ, ಅನುಭವಿಗಳ ಕೂಟ ಎನಿಸಿಕೊಂಡಿರುವ ವಿಧಾನ ಪರಿಷತ್ತಿನ ಚುನಾವನೆಯ ಮತದಾರ ರಿಂದ ಪ್ರಬುದ್ಧ ಮತದಾನ ಅಪೇಕ್ಷಿಸಲಾಗುತ್ತದೆ. ಅವರಿಗೆ ಮತ ಹಾಕುವ ರೀತಿ ಗೊತ್ತಿಲ್ಲ ಎನ್ನಲು ಸಾಧ್ಯವಿಲ್ಲ.
ಹಳ್ಳಿಗರು, ಅಶಿಕ್ಷಿತರು ಕೂಡ ಸರಿಯಾಗಿಯೇ ಮತ ಚಲಾಯಿಸುತ್ತಾರೆ. ಅಂದರೆ ಇವು ಅಜ್ಞಾನ ದಿಂದ ಹಾಕಿದ ಮತಗಳಲ್ಲ ಎಂಬುದು ಸ್ಪಷ್ಟ. ಹಾಗಾದರೆ ಹೀಗೆ ಯಾಕೆ? ಈ ಅಸಿಂಧು ಮತಗಳು ನಾಲ್ಕು ಕ್ಷೇತ್ರಗಳ ಪೈಕಿ ಎರಡರ ಹಣೆಬರಹವನ್ನೇ ಬದಲಾಯಿಸಿದೆ. ಸೋತ ಅಭ್ಯರ್ಥಿಗಳ ಮತಗಳ ಅಂತರಕ್ಕಿಂತ ಹೆಚ್ಚು ಅಸಿಂಧು ಮತಗಳು ಬಿದ್ದಿವೆ. ಇಲ್ಲಿ ಇದರ ಹೂರಣ ಬಯಲಾಗುತ್ತದೆ. ಈ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸ್ಪರ್ಧಿಗಳಿಂದ ಓಲೈಕೆ, ಆಮಿಷದ ಸುದ್ದಿಗಳು ವಿಪುಲವಾಗಿ ಹರಿದಾಡಿದ್ದವು.
ಪ್ರಜ್ಞಾವಂತರು ಹಣ, ಮದ್ಯ ಮೊದಲಾದ ಚಿಲ್ಲರೆ ಆಮಿಷಗಳಿಗೆ ಒಳಗಾಗಿ ತಮ್ಮ ಮತಗಳನ್ನು ಮಾರಿಕೊಳ್ಳುವ ಬಗ್ಗೆ ಸಾಕಷ್ಟು ಟೀಕೆ ಇದೆ. ಹಲವು ‘ಪ್ರಜ್ಞಾವಂತರು’ ಎರಡೂ ಕಡೆಗಳಿಂದ ಆಮಿಷಗಳನ್ನು ಪಡೆದುಕೊಂಡು, ಯಾರಿಗೆ ಮತ ಹಾಕಲಿ ಎಂಬ ಪಾಪಪ್ರಜ್ಞೆಗೆ ಒಳಗಾಗಿ ಬೇಕೆಂದೇ ಅಸಿಂಧು ಮತಗಳನ್ನು ಹಾಕುವ ರೂಢಿ ಇದೆ. ಇದರಿಂದ ಪ್ರಜಾಪ್ರಭುತ್ವಕ್ಕೇನೂ ಪ್ರಯೋಜನವಿಲ್ಲ. ಚುನಾವಣೆಯ ಸೌಂದರ್ಯ, ಪಾರದರ್ಶಕತೆ ಕೆಡುತ್ತದೆ. ಅಯೋಗ್ಯರು ಆರಿಸಿ ಬರುತ್ತಾರೆ.
ಈ ಮತದಾರರಿಗೆ ಮತ ಹಾಕಲು ತಿಳಿಯದು ಎಂದು ಭಾವಿಸುವ ಮಂಕುದಿಣ್ಣೆಗಳು ಇಲ್ಲಿ ಯಾರೂ ಇಲ್ಲ. ಈ ಮತಗಳು ಕುಲಗೆಟ್ಟವೋ, ಇವುಗಳನ್ನು ಹಾಕಿದವರು ಕುಲಗೆಟ್ಟವರೋ, ಹಾಕಿಸಿದವರು ಕುಲಗೆಟ್ಟವರೋ ಎಂಬ ಚಿಂತನೆ ನಡೆಯಬೇಕಷ್ಟೆ.