ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಹೀನಾಯ ಸೋಲನ್ನು ಕಂಡಿರುವುದು ಈಗಾಗಲೇ ಜಗಜ್ಜಾಹೀರು. ‘ಮತಗಳ್ಳತನ’ದ ಚರ್ಚಾ ವಿಷಯವನ್ನು ಮುನ್ನೆಲೆಗೆ ತಂದು ಇನ್ನಿಲ್ಲದ ಉತ್ಸಾಹದಿಂದ ಪ್ರಚಾರ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿಯವರಿಗೆ ಈ ಬೆಳವಣಿಗೆಯಿಂದ ಸಾಕಷ್ಟು ನಿರಾಶೆಯಾಗಿರುವುದಂತೂ ಖರೆ.
ಮತ್ತೊಂದೆಡೆ, ಒಂದು ಕಾಲಕ್ಕೆ ‘ಚುನಾವಣಾ ತಂತ್ರಗಾರ’ ಎಂಬ ಹಣೆಪಟ್ಟಿಯನ್ನು ನೇತು ಹಾಕಿಕೊಂಡಿದ್ದ ಪ್ರಶಾಂತ್ ಕಿಶೋರ್ ಅವರಂತೂ ತೀವ್ರ ಮುಖಭಂಗವನ್ನು ಅನುಭವಿಸಿ ದ್ದಾರೆ; ಕಾರಣ ಅವರು ಹುಟ್ಟು ಹಾಕಿದ್ದ ‘ಜನ ಸುರಾಜ್ ಪಕ್ಷ’ಕ್ಕೆ ಬಿಹಾರದಲ್ಲಿ ಬೋಣಿ ಆಗಿಲ್ಲ. ಈ ಚುನಾವಣೆಯಲ್ಲಿ ತಂತಮ್ಮ ಪಕ್ಷಗಳು ಸೋತು, ಎನ್‌ಡಿಎ ಪಾಳಯವು ಗೆದ್ದಿ ರುವುದಕ್ಕೆ ಈ ಇಬ್ಬರು ನಾಯಕರು ತಮ್ಮದೇ ಆದ ಕಾರಣಗಳನ್ನು ಹೇಳಬಹುದು; ಆದರೆ ಈ ಇಬ್ಬರೂ ನಾಯಕರು ತಮ್ಮದೇ ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವು ದಕ್ಕೆ ಇದು ಸಕಾಲ ಎಂಬುದಂತೂ ನಿಜ.
ಇದನ್ನೂ ಓದಿ: Vishwavani Editorial: ಮತಾಂಧ ಶಕ್ತಿಗಳ ದಮನ ಅಗತ್ಯ
ಈ ಪೈಕಿ ರಾಹುಲ್ ಗಾಂಧಿಯವರು, ಕಾಂಗ್ರೆಸ್‌ನಂಥ ‘ಐತಿಹಾಸಿಕ’ ಪಕ್ಷದ ಮುಂಚೂಣಿ ಯಲ್ಲಿ ತಾವು ನಿಂತಾಗಿನಿಂದ ದೇಶದ ವಿವಿಧೆಡೆ ಪಕ್ಷವನ್ನು ದಡ ಮುಟ್ಟಿಸಲು/ಗಟ್ಟಿಗೊಳಿ ಸಲು ಆಗಿಲ್ಲವೇಕೆ? ಎಂಬ ನೆಲೆಯಲ್ಲಿ ಆತ್ಮಾವಲೋಕನಕ್ಕೆ ಇಳಿಯಬೇಕು.
ಮತ್ತೊಂದೆಡೆ ಪ್ರಶಾಂತ್ ಕಿಶೋರರು, ಅನ್ಯ ಪಕ್ಷಗಳಿಗೆ ತಾವು ಹೇಳಿ ಕೊಡುತ್ತಿದ್ದ ಗೆಲುವಿನ ತಂತ್ರಗಳು ಸ್ವತಃ ತಮ್ಮದೇ ಪಕ್ಷದ ಕೈಹಿಡಿಯಲಿಲ್ಲವೇಕೆ? ಎಂದು ಪ್ರಶ್ನಿಸಿಕೊಳ್ಳಬೇಕು. ಆಗ ಮಾತ್ರವೇ, ‘ನಿರ್ದಿಷ್ಟ ರಾಜಕಾರಣಿಯಲ್ಲಿ ಮತ್ತು ರಾಜಕೀಯ ಪಕ್ಷದಲ್ಲಿ’ ಜನರು ಏಕೆ ನಂಬಿಕೆಯನ್ನು ಇಡುತ್ತಾರೆ ಅಥವಾ ಇಡುವುದಿಲ್ಲ? ಎಂಬ ಪ್ರಶ್ನೆಗಿರುವ ಉತ್ತರಗಳು ಸುರುಳಿ ಸುರಳಿಯಾಗಿ ಬಿಚ್ಚಿಕೊಳ್ಳುತ್ತವೆ. ಅಂಥ ಒಳನೋಟಗಳಿಗೆ ಈ ಇಬ್ಬರೂ ನಾಯ ಕರು ಒಡ್ಡಿಕೊಳ್ಳುವಂತಾಗಲಿ...