ಡಿ.ಕೆ.ಶಿವಕುಮಾರ್ ಅವರು ರಾಜ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಸಿದ್ದರಾಮಯ್ಯ ಅವರಿಂದ ತೆರವಾಗಿರುವ ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಏರಲಿದ್ದಾರೆ. ಮೂರು ವರ್ಷಗಳಿಂದ ಡಿಸಿಎಂ ಆಗಿ ಸಾಕಷ್ಟು ಮಾಗಿದ ಅನುಭವ ಗಳಿಸಿಕೊಂಡಿರುವ ಡಿಕೆಶಿ ಅವರು ಇದೀಗ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದು, ಅವರ ನಾಯಕತ್ವದಲ್ಲಿ ರಾಜ್ಯದ ಮುನ್ನಡೆ ಹೇಗಿರಲಿದೆ ಎಂಬ ಕುತೂಹಲವಿದೆ.
ನಾಯಕತ್ವದ ವಿಚಾರದಲ್ಲಿ ಡಿಕೆಶಿ ಅವರನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಕಳೆದ ಬಾರಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿ ಮಹತ್ವದ ಹೊಣೆ ವಹಿಸಿಕೊಂಡು, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿ, ಬಿಜೆಪಿಯ ಆಡಳಿತದ ಲೋಪ ದೋಷಗಳನ್ನು ಪರಿಣಾಮಕಾರಿಯಾಗಿ ಟೀಕಿಸುತ್ತ, ಕಾಂಗ್ರೆಸ್ ಆಡಳಿತಕ್ಕೆ ಬರುವಲ್ಲಿ ಗಣನೀಯ ಸಾಧನೆ ಮಾಡಿದವರು ಅವರು.
ಸತತ ಎಂಟನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು ತಮ್ಮ ಕ್ಷೇತ್ರದ ಒಳಹೊರಗು ಹಾಗೂ ಜನಾಭಿಪ್ರಾಯವನ್ನು ಚೆನ್ನಾಗಿಯೇಬಲ್ಲರು. ಈ ಹಿಂದೆಯೂ ನಾಲ್ವರು ಮುಖ್ಯಮಂತ್ರಿಗಳ ಸಂಪುಟಗಳಲ್ಲಿ ಹಲವು ಖಾತೆ ನಿರ್ವಹಿಸಿದ ಅನುಭವವೂ ಅವರಲ್ಲಿದೆ. ನೇರ ನಡೆ ನುಡಿಯ ಅವರು ಪಕ್ಷದ ಸಂಕಷ್ಟದ ಸ್ಥಿತಿಯಲ್ಲಿರುವಾಗ ಮುನ್ನಗ್ಗಿ ಕ್ಲಿಷ್ಟ ಪರಿಸ್ಥಿತಿಗಳನ್ನು ಲೀಲಾಜಾಲವಾಗಿ ಪರಿಹರಿಸುವುದರಿಂದ ಅವರಿಗೆ ಪಕ್ಷದ ಟ್ರಬಲ್ ಶೂಟರ್ ಎಂಬ ಬಿರುದೂ ಪ್ರಾಪ್ತವಾಗಿದೆ.
ಇದನ್ನೂ ಓದಿ: Vishwavani Editorial: ಎಲ್ ನಿನೋ ಎದುರಿಸೋಣ
ಹಿಂದೆ ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರ ಬೀಳದಂತೆ ಹಾಗೂ ಗುಜರಾತ್‌ನ ರಾಜ್ಯಸಭೆ ಚುನಾವಣೆ ಸಂದರ್ಭ ಪಕ್ಷದ ಟ್ರಬಲ್ ಶೂಟರ್ ಆಗಿ ಕಾರ್ಯ ನಿರ್ವಹಿಸಿ ಹೈಕಮಾಂಡ್ ಮೆಚ್ಚುಗೆ ಗಳಿಸಿದ್ದರು. ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ರಾಜಕೀಯ ಯಾತ್ರೆ ಆರಂಭಿಸಿದ ಅವರು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿ ಬೆಳೆದು, ೨೦೨೦ರಲ್ಲಿ ಕೆಪಿಸಿಸಿ ಅಧ್ಯಕ್ಷ ಆಗುವವರೆಗೆ ಪರಿಶ್ರಮದ ಹಾದಿಯಲ್ಲಿ ಸಾಗಿ ಬಂದಿದ್ದಾರೆ.
ಬಿಜೆಪಿ ಕೋಪಕ್ಕೆ ತುತ್ತಾಗಿ ಜೈಲುವಾಸವನ್ನೂ ಕಂಡದ್ದುಂಟು. ಮೇಕೆದಾಟು ಪಾದಯಾತ್ರೆ ಸೇರಿದಂತೆ ಹಲವು ಹೋರಾಟಗಳಲ್ಲೂ ಅವರು ಮುಂಚೂಣಿಯಲ್ಲಿದ್ದವರು. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಅವರ ರಾಜಕೀಯ ಖದರ್ ಬೇರೆಯೇ ಆಗಿದೆ. ಪಕ್ಷವನ್ನು ಸಂಘಟಿಸಲು ಹಾಗೂ ಅಧಿಕಾರಕ್ಕೆ ತರಲು ತಾವು ಪಟ್ಟ ಶ್ರಮಕ್ಕೆ ತಕ್ಕ ಕೂಲಿ ಸಿಗಬೇಕು ಎಂದು ಅವರು ಹೇಳಿಕೊಂಡದ್ದುಂಟು. ಅದು ಅವರಿಗೆ ಈಗ ಸಿಕ್ಕಿರುವಂತಿದೆ. ತಮ್ಮ ಪಕ್ಷದ ಗ್ಯಾರಂಟಿ ಗಳನ್ನು ಕೈಬಿಡದೆ, ಇತರ ಯೋಜನೆಗಳನ್ನೂ ಕೈಗೊಂಡು ಸಮರ್ಥ ಆಡಳಿತಗಾರ ಎನಿಸಬೇಕಾದ ಸವಾಲು ಈಗ ಅವರ ಮುಂದಿದೆ.