ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಸಮಸ್ಯೆಯ ಎರಡು ಮುಖಗಳು

ಬೇಸಗೆ ಕಾಲ ಸನ್ನಿಹಿತವಾಗುತ್ತಿದೆ ಎಂದಾಕ್ಷಣ, ಸುಡುಸುಡು ಬಿಸಿಲು, ದಾಹವನ್ನು ಹಿಂಗಿಸ ಲಾಗದೆ ಕೈಚೆಲ್ಲಿ ಕೂರುವ ನೀರಿನ ಕೊರತೆ ಹೀಗೆ ಒಂದಿಷ್ಟು ಆತಂಕಗಳು ಚಿತ್ತಭಿತ್ತಿಯಲ್ಲಿ ಮೂಡುವುದಿದೆ. ಅದರಲ್ಲೂ ನೀರಿನ ಸಮಸ್ಯೆಯು ‘ಸಾರ್ವಕಾಲಿಕ’ ವಾಗಿರುವ ಪ್ರದೇಶಗಳ ಲ್ಲಂತೂ ಈ ಆತಂಕ ತಾರಕಕ್ಕೆ ಏರುತ್ತದೆ ಎನ್ನಲಡ್ಡಿಯಿಲ್ಲ.

ಬೇಸಗೆ ಕಾಲ ಸನ್ನಿಹಿತವಾಗುತ್ತಿದೆ ಎಂದಾಕ್ಷಣ, ಸುಡುಸುಡು ಬಿಸಿಲು, ದಾಹವನ್ನು ಹಿಂಗಿಸಲಾಗದೆ ಕೈಚೆಲ್ಲಿ ಕೂರುವ ನೀರಿನ ಕೊರತೆ ಹೀಗೆ ಒಂದಿಷ್ಟು ಆತಂಕಗಳು ಚಿತ್ತಭಿತ್ತಿಯಲ್ಲಿ ಮೂಡುವುದಿದೆ. ಅದರಲ್ಲೂ ನೀರಿನ ಸಮಸ್ಯೆಯು ‘ಸಾರ್ವಕಾಲಿಕ’ ವಾಗಿರುವ ಪ್ರದೇಶಗಳಲ್ಲಂತೂ ಈ ಆತಂಕ ತಾರಕಕ್ಕೆ ಏರುತ್ತದೆ ಎನ್ನಲಡ್ಡಿಯಿಲ್ಲ.

ಇಷ್ಟು ಸಾಲದೆಂಬಂತೆ, ಕೆಲ ಪ್ರದೇಶಗಳ ಕುಡಿಯುವ ನೀರಿನ ಮಾದರಿಗಳಲ್ಲಿ ಆರ್ಸೆನಿಕ್, ಫ್ಲೋರೈಡ್, ಕಬ್ಬಿಣ, ನೈಟ್ರೇಟ್, ಲವಣಾಂಶ ಮತ್ತು ಸೂಕ್ಷ್ಮಜೀವಿಯಂಥ ಮಾಲಿನ್ಯಕಾರಕ ಗಳು ಕಂಡುಬಂದು, ಕಣ್ಣೆದುರಿನ ಬೋಗುಣಿಯಲ್ಲಿ ನೀರಿದ್ದರೂ ಕುಡಿಯಲಾಗದಂಥ ಅಸಹಾಯಕತೆ ಜನರನ್ನು ಕಾಡುವುದಿದೆ.

ಇದನ್ನೂ ಓದಿ: Vishwavani Editorial: ಈ ಬಾರಿಯ ಯುಗಾದಿ ಹೀಗೇನಾ?

ಇದು ಸಮಸ್ಯೆಯ ಒಂದು ಮಗ್ಗುಲಾದರೆ, ನದಿಗಳ ಒಡಲಿನಲ್ಲಿ ನೀರನ್ನು ಗಮನಾರ್ಹವಾಗಿ ಹಿಡಿದಿಟ್ಟುಕೊಳ್ಳಬಲ್ಲ ಮರಳಿನ ಮೇಲೂ ಕೆಲವು ಅಕ್ರಮ ದಂಧೆಕೋರರ ಕಣ್ಣು ಬೀಳು ವುದು ಮತ್ತೊಂದು ಪಿಡುಗು. ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು ಬರೋಬ್ಬರಿ 22.58 ಕೋಟಿ ರುಪಾಯಿ ಮೌಲ್ಯದ ಅಕ್ರಮ ಮರಳು ದಾಸ್ತಾನನ್ನು ವಶಪಡಿಸಿ ಕೊಂಡಿರುವುದು ವರದಿಯಾಗಿದೆ.

ಸಮಸ್ಯೆಯ ಈ ಎರಡೂ ಮಗ್ಗುಲುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಕುಡಿಯುವ ನೀರಿನ ಸಮಸ್ಯೆಯು ಅತಿರೇಕದ ಮಟ್ಟಕ್ಕೆ ಮುಟ್ಟುತ್ತಿರುವುದಕ್ಕೆ ಮನುಷ್ಯನ ಕೊಡುಗೆಯೇ ಗಣನೀಯ ಪ್ರಮಾಣದಲ್ಲಿರುವುದು ಎದ್ದು ಕಾಣುತ್ತದೆ. ಇಷ್ಟಾಗಿಯೂ ಸಂಬಂಧಪಟ್ಟವರು ಇದಕ್ಕೊಂದು ದೀರ್ಘಕಾಲೀನ ಪರಿಹಾರೋಪಾಯವನ್ನು ಕಂಡುಹಿಡಿಯದಿರುವುದಕ್ಕೆ ಏನನ್ನುವುದು? ಗಡ್ಡಕ್ಕೆ ಬೆಂಕಿ ಬಿದ್ದಾಗ ಮಾತ್ರವೇ ಬಾವಿ ತೋಡಿಸಲು ಹರಸಾಹಸ ಪಡುವುದರ ಬದಲು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ವಿವೇಚನಾಯುತ ಹೆಜ್ಜೆ ಎನಿಸುತ್ತದೆ. ಅಂಥದೊಂದು ಹೆಜ್ಜೆಯನ್ನು ಆಳುಗರು ಇರಿಸಲಿ ಎಂಬುದು ಶ್ರೀಸಾಮಾನ್ಯರ ಆಶಯ ಮತ್ತು ನಿರೀಕ್ಷೆ...