ಕರ್ನಾಟಕದ ಜನರಿಗೆ ಕುಡಿಯುವ ನೀರಿಗೆ ಅಗತ್ಯವಾದ ಪ್ರಸ್ತಾವಿತ ಮೇಕೆದಾಟು ಯೋಜನೆ ಗೆ ತಮಿಳುನಾಡು ಸಿಎಂ ವಿಜಯ್ ಅಡ್ಡಗಾಲು ಹಾಕಿದ್ದಾರೆ. ಆದರೆ ಈ ವಿಚಾರವಾಗಿ ತಮಿಳುನಾಡು ಸಲ್ಲಿಸಿದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಈ ಮೂಲಕ ವಿಜಯ್‌ಗೆ ಹಿನ್ನಡೆಯಾಗಿದೆ.
ಆದರೆ, ತಮಿಳು ಜನರ ಭಾವನೆಯ ವಿಷಯವಾದ ನೀರಿನ ಹಂಚಿಕೆಯ ವಿಚಾರವನ್ನು ವಿಜಯ್ ಕೈಗೆತ್ತಿಕೊಂಡಂತಿದ್ದು, ತಮ್ಮ ಸಿಎಂಗಿರಿಯ ಆರಂಭದ ದಿನಗಳಿಂದಲೇ ತಗಾದೆ ಆರಂಭಿಸಿರುವುದು ಆತಂಕದ ವಿಚಾರ.
ಕರ್ನಾಟಕ ಸರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವ ಪ್ರಮುಖ ಉದ್ದೇಶದಿಂದ ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಸುಮಾರು 67 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ಜಲಾಶಯ ಹೊಂದಿರಲಿದೆ. ತಮಗೆ ದೊರೆಯುವ ಕಾವೇರಿ ನೀರು ಕಡಿತವಾಗಬಹುದು ಎಂಬುದು ಕಾನೂನು ಹೋರಾಟ ಆರಂಭಿಸಿರುವ ತಮಿಳುನಾಡಿನ ಆತಂಕ.
ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ಮುಂದಾದ ಸರ್ಕಾರ; ತಂಡ ರಚಿಸಿ ಆದೇಶ
ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯದ ಪರವಾಗಿ ನಿಂತಿದೆ. ಕೋರ್ಟ್ ಈ ಹಿಂದಿನ ಆದೇಶದ ಸ್ಪಷ್ಟ ಸೂಚನೆ ನೀಡಿದ್ದು, ತಮಿಳುನಾಡಿನ ಪಾಲಿನ 177 ಟಿಎಂಸಿ ನೀರನ್ನು ಹರಿಸಿ, ಉಳಿದದ್ದನ್ನು ರಾಜ್ಯದ ವಿವೇಚನೆಗೆ ಬಿಟ್ಟಿದೆ. ಆದರೆ ಮೇಕೆದಾಟು ಅಣೆಕಟ್ಟಿನಿಂದ ತಮಿಳುನಾಡಿಗೆ ಬರುವ ಕಾವೇರಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ.
ಇದು ಕಾವೇರಿ ಜಲವಿವಾದ ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ. ಕೆಳ ಭಾಗದ ರಾಜ್ಯದ ಒಪ್ಪಿಗೆಯಿಲ್ಲದೆ ನದಿಯ ಮೇಲ್ಭಾಗದಲ್ಲಿ ಯಾವುದೇ ಯೋಜನೆ ಮಾಡುವಂತಿಲ್ಲ ಎಂಬುದು ತಮಿಳುನಾಡು ವಾದ. ಆದರೆ ಮಳೆಗಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದಿಂದ ಜಲಾಶಯಗಳು ಭರ್ತಿಯಾಗಿ, ಅಪಾರ ಪ್ರಮಾಣದ ಹೆಚ್ಚುವರಿ ನೀರು ತಮಿಳುನಾಡಿನ ಮೂಲಕ ಸಮುದ್ರಪಾಲಾಗುತ್ತದೆ.
ಈ ಹೆಚ್ಚುವರಿ ನೀರನ್ನು ಮಾತ್ರ ಮೇಕೆದಾಟುವಿನಲ್ಲಿ ಸಂಗ್ರಹಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಬಿಡಬೇಕಾದ ನೀರಿನ ಪಾಲನ್ನು ನೀಡಿದ ನಂತರವೇ ಉಳಿಯುವ ನೀರನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ತಮಿಳುನಾಡಿಗೆ ಯಾವುದೇ ನಷ್ಟವಿಲ್ಲ. ಇದು ಕುಡಿಯುವ ನೀರಿನ ಯೋಜನೆ. ರಾಷ್ಟ್ರೀಯ ಜಲ ನೀತಿ ಪ್ರಕಾರ ಕುಡಿಯುವ ನೀರಿನ ಯೋಜನೆಗಳಿಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯವೀಗ ಪರಿಷ್ಕೃತ ಡಿಪಿಆರ್ ಸಲ್ಲಿಕೆ ಪ್ರಕ್ರಿಯೆಯಲ್ಲಿದೆ. ಈ ಹಂತದಲ್ಲಿ ತಮಿಳುನಾಡಿನ ತಗಾದೆ ಯನ್ನು ಕಾನೂನು ಹೋರಾಟ ಬಲಿಷ್ಠಗೊಳಿಸುವ ಮೂಲಕ ರಾಜ್ಯ ಸರಕಾರ ಉತ್ತರಿಸ ಬೇಕಿದೆ.