Vishwavani Editorial: ನಾಲಿಗೆ ತೊದಲಿದರೂ ಎಡವಬಾರದು!
ತಂತಮ್ಮ ‘ಇಷ್ಟದೇವತೆ’ ಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿರುವ ಸನಾತನಧರ್ಮವು ಈ ನೆಲೆಯಲ್ಲಿ ಯಾರ ಕಾಲಿಗೂ ಸರಪಳಿಯನ್ನು ತೊಡಿಸಿಲ್ಲ
ಪ್ರತಿಯೊಬ್ಬರಿಗೂ ‘ವೈಯಕ್ತಿಕ’ ಮತ್ತು ‘ಸಾರ್ವತ್ರಿಕ’ ನೆಲೆಯ ಎರಡು ಧರ್ಮಗಳು ಇರುತ್ತವೆ. ವೈಯ ಕ್ತಿಕ ನೆಲೆಯಲ್ಲಿ ಅಥವಾ ಮನೆಯೊಳಗೆ ಇರುವಾಗಿನ ನಮ್ಮ ಭಾಷೆ, ಭಾವ, ಶ್ರದ್ಧಾಭಕ್ತಿ ಮತ್ತು ನಂಬಿಕೆಗಳೇನಿವೆ ಅವು ನಮ್ಮವು; ಅವನ್ನು ಹೊರಗಿನವರ ಮೇಲೂ ಹೇರಬೇಕು ಅಂತೇನಿಲ್ಲ. ಅದೇ ರೀತಿಯಲ್ಲಿ, ಸಾರ್ವತ್ರಿಕ ನೆಲೆಯಲ್ಲಿ ಮಾತಿಗೆ ನಿಂತಾಗ, ‘ವೈಯಕ್ತಿಕ’ವಾದುದನ್ನೆಲ್ಲ ಗಂಟುಮೂಟೆ ಕಟ್ಟಿ, ‘ಸಮಷ್ಟಿಪ್ರಜ್ಞೆ’ ಇಟ್ಟುಕೊಂಡೇ ಮಾತನಾಡಬೇಕಾಗುತ್ತದೆ.
ಅದು ಅಂಥ ಮಾತನಾಡುವವರಿಗೂ ಕ್ಷೇಮದಾಯಕ, ಅದನ್ನು ಕೇಳುವವರಿಗೂ ಸುಖದಾಯಕ. ಆದರೆ, ಇಂಥ ವೇಳೆ ತುಟಿಮೀರಿದಾಗ ಅಥವಾ ಸಮಷ್ಟಿಪ್ರಜ್ಞೆಗೆ ಧಕ್ಕೆಯುಂಟು ಮಾಡಿದಾಗ ಅದು ಸಮಾಜದಲ್ಲಿ ಅಸಮಾಧಾನದ ಅಲೆಗಳನ್ನು ಎಬ್ಬಿಸುತ್ತದೆ. ‘ಮುಕ್ಕೋಟಿ ದೇವತೆಗಳು’ ಎಂಬ ಪರಿ ಕಲ್ಪನೆಗೆ ಒಡ್ಡಿಕೊಂಡಿರುವ ಮತ್ತು ಒಗ್ಗಿಕೊಂಡಿರುವ ಸಂಸ್ಕೃತಿ-ಪರಂಪರೆ ನಮ್ಮದು. ತಂತಮ್ಮ ‘ಇಷ್ಟದೇವತೆ’ ಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿರುವ ಸನಾತನಧರ್ಮವು ಈ ನೆಲೆಯಲ್ಲಿ ಯಾರ ಕಾಲಿಗೂ ಸರಪಳಿಯನ್ನು ತೊಡಿಸಿಲ್ಲ.
ಇದನ್ನೂ ಓದಿ: Vishwavani Editorial: ಶಾಶ್ವತ ಶಾಂತಿಗೆ ಹೆಜ್ಜೆಯಾಗಲಿ
ಮಾತ್ರವಲ್ಲದೆ, ಕಲ್ಲು, ಗಿಡ, ಮರಗಳಲ್ಲೂ, ಹಸು, ಹಾವು, ಬಸವನಂಥ ಪ್ರಾಣಿಗಳಲ್ಲೂ ಪರಮಾತ್ಮ ನನ್ನು ಕಾಣುವ ಪರಂಪರೆ ನಮ್ಮದು. ನಿರ್ದಿಷ್ಟ ದಿನ ಮತ್ತು ಕ್ಷಣದಲ್ಲಿ ಕೈಗೊಳ್ಳುವ ತೀರ್ಥಯಾತ್ರೆ ಯೋ ಪುಣ್ಯಸ್ನಾನವೋ ನಮ್ಮ ಬದುಕಿನ ಔನ್ನತ್ಯಕ್ಕೆ ಕಾರಣವಾಗುತ್ತವೆ ಎಂಬ ನಂಬಿಕೆ ಯೂ ಈ ಪರಂಪರೆಯ ಭಾಗವೇ.
ಇಂಥ ಸಮಷ್ಟಿಭಾವಕ್ಕೆ ಯಾರೇ ಧಕ್ಕೆಯುಂಟು ಮಾಡಿದರೂ ನಮ್ಮ ಜನ ಅದನ್ನು ಸಹಿಸುವುದಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ, ಈ ಬಾರಿಯ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯಸ್ನಾನ ಕೈ ಗೊಂಡು ಪುನೀತರಾಗಲು ಹಾತೊರೆದು ಭಾರತೀಯರು ಮಾತ್ರವಲ್ಲದೆ ವಿದೇಶಿ ಮೂಲದ, ಹಿಂದೂ ಗಳಲ್ಲದ ಗಣನೀಯ ಸಂಖ್ಯೆಯ ಜನರು ಪ್ರಯಾಗರಾಜ್‌ಗೆ ತೆರಳಿದ್ದನ್ನು ಕಂಡಿದ್ದೇವೆ, ಕೇಳಿದ್ದೇವೆ.
ಹಾಗಂತ, ಇವರೆಲ್ಲರಲ್ಲಿ ಕೆನೆಗಟ್ಟಿರುವುದು ‘ಕುರುಡುನಂಬಿಕೆ’ ಎನ್ನಲಾದೀತೇ? ಅಥವಾ ಹೀಗೆ ಪುಣ್ಯಸ್ನಾನಕ್ಕೆಂದು ಬಂದವರಲ್ಲಿ ‘ಬಡತನವನ್ನು ತೊಡೆದು ಕೊಳ್ಳುವ’ ಬಯಕೆಯಷ್ಟೇ ಮನೆ ಮಾಡಿರುತ್ತದೆ ಎಂಬ ‘ಭಾವ-ಬೇಲಿ’ ಯನ್ನು ಹಾಕಲಾದೀತೇ? ಅಯ್ಯಗಳಿರಾ... ನಿಮ್ಮ ನಂಬಿಕೆ ಗಳನ್ನು ಪಟ್ಟು ಹಿಡಿದು ಪಾಲಿಸಿ, ಅದಕ್ಕೆ ಯಾರದ್ದೇ ತಕರಾರಿಲ್ಲ. ಹಾಗಂತ, ಇನ್ನೊಬ್ಬರ ನಂಬಿಕೆ ಯ ಸೌಧದ ಇಟ್ಟಿಗೆಯನ್ನು ಅಲುಗಾಡಿಸಲು ಯತ್ನಿಸದಿರಿ. ಬಲ್ಲವರು ಎನಿಸಿಕೊಂಡವರಿಗೆ ಇಷ್ಟನ್ನು ಮಾತ್ರ ಹೇಳಲು ಸಾಧ್ಯ!