ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ದುಡ್ಡು ಮಾಡುವ ದಂಧೆಯೇ?!

ಲೋಕಸಭೆ ಚುನಾವಣೆ ಮತ್ತು ದೇಶದ ಅಷ್ಟೂ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮಾತ್ರವಲ್ಲದೆ, ವಿವಿಧ ಸ್ತರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ಪರಿಗಣಿಸಿ ನೋಡಿದರೆ, ನೇಪಥ್ಯದಲ್ಲಿ ಯಾವ ಮಟ್ಟಿಗೆ ಇಂಥ ‘ದುಡ್ಡಿನ ವ್ಯವಹಾರ’ ನಡೆಯುತ್ತಿರಬಹುದು? ಎಂದು ಲೆಕ್ಕಿಸಬಹುದು. ಛೇ, ಭಾರತ ಇನ್ನೂ ಪ್ರಬುದ್ಧನಾಗಬೇಕಿದೆ...

Vishwavani Editorial: ದುಡ್ಡು ಮಾಡುವ ದಂಧೆಯೇ?!

-

Ashok Nayak Ashok Nayak Oct 21, 2025 10:29 AM

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷ ದಿಂದ ಟಿಕೆಟ್ ಬಯಸಿದ ವ್ಯಕ್ತಿಯೊಬ್ಬ, ಅದು ಕೈತಪ್ಪಿ ಹೋದ ಕಾರಣಕ್ಕೆ ಆಘಾತಕ್ಕೊಳಗಾಗಿ, ಅಂಗಿ ಹರಿದುಕೊಂಡು ರಸ್ತೆಯಲ್ಲೇ ಹೊರಳಾಡಿ ಗೋಳಾಡಿರುವುದು ವರದಿಯಾಗಿದೆ.

ಇಷ್ಟು ಮಾತ್ರವಲ್ಲದೆ, ‘ಟಿಕೆಟ್ ಕೊಡಲು 2.7 ಕೋಟಿ ರುಪಾಯಿ ಕೇಳಿದ್ದರು, ಮಕ್ಕಳ ಮದುವೆ ಗೆಂದು ಕೂಡಿಟ್ಟಿದ್ದ ಹಣವನ್ನೆಲ್ಲಾ ಕೊಟ್ಟರೂ ಅದು ಸಿಗಲಿಲ್ಲ; ಹಣನ್ನಾದರೂ ಮರಳಿಸಲಿ’ ಎಂದು ಆತ ಅಲವತ್ತುಕೊಂಡಿದ್ದಾನೆ. ಈ ಘಟನೆಯ ಸತ್ಯಾಸತ್ಯತೆಯಿನ್ನೂ ಹೊರಬೀಳಬೇಕಿದೆ; ಒಂದೊಮ್ಮೆ ನಿಜವಾಗಿದ್ದಲ್ಲಿ ಅದು ವಿಷಾದನೀಯವೂ ಹೌದು,

ಆಘಾತಕಾರಿಯೂ ಹೌದು. ಹೀಗೆ ಟಿಕೆಟ್ ನೀಡುವಾಗಲೇ ದುಡ್ಡನ್ನು ಪೀಕಿಸುವ ಪ್ರವೃತ್ತಿಗೆ ರಾಜಕೀಯವ ಪಕ್ಷಗಳು ಒಡ್ಡಿಕೊಂಡಿರುವುದು ವಿಷಾದಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ನೋಟುಗಳನ್ನು ಬಿತ್ತಿ ಚುನಾವಣೆಯಲ್ಲಿ ಗೆದ್ದುಬಿಟ್ಟರೆ, ತರುವಾಯದಲ್ಲಿ ಕಂತೆಕಂತೆಗಟ್ಟಲೆ ನೋಟುಗಳನ್ನು ಗೆಬರಿಕೊಳ್ಳಬಹುದು ಎಂಬ ಚಿತ್ತಸ್ಥಿತಿ ಜನರಲ್ಲೂ ಮಡುಗಟ್ಟಿರುವುದು ಆಘಾತ ಕಾರಿಯಾಗಿದೆ.

ಇದನ್ನೂ ಓದಿ: Vishwavani Editorial: ಸಾರ್ವಭೌಮತೆಯ ಸಂರಕ್ಷಣೆ

ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಹತ್ತಾರು ಅಭ್ಯರ್ಥಿಗಳ ಪೈಕಿ ಯೋಗ್ಯ ಎನಿಸಿದವನನ್ನು ತಮ್ಮ ಪ್ರತಿನಿಧಿಯಾಗಿ ಚುನಾಯಿಸಲು ಜನರು ತವಕಿಸುತ್ತಾರೆ. ಇದು ಕೈಗೂಡಬೇಕೆಂದರೆ ರಾಜಕೀಯ ಪಕ್ಷಗಳು ಹಾಗೂ ಅದರ ವತಿಯಿಂದ ಸ್ಪರ್ಧಿಸುವವರಲ್ಲಿ ‘ಸಚ್ಚಾರಿತ್ರ್ಯ’ ಎಂಬುದು ಮನೆಮಾಡಿರಬೇಕು. ಆದರೆ ಪಕ್ಷಗಳೇ ದುಡ್ಡು ಪೀಕಿಸಿ ಟಿಕೆಟ್ ನೀಡಿದರೆ, ಹಾಗೆ ಟಿಕೆಟ್ ಖರೀದಿಸಿ ದಾತ ಗೆದ್ದರೆ, ಇನ್ನೆಷ್ಟರ ಮಟ್ಟಿಗೆ ಜನಕಲ್ಯಾಣವಾದೀತು,

ಅಭಿವೃದ್ಧಿ ಚಟುವಟಿಕೆಗಳು ನಡೆದಾವು ಎಂಬುದನ್ನು ನೀವೇ ಊಹಿಸಿ. ‘ಇದು ಗೊತ್ತಿರುವಂಥ ವಿಷಯವೇ ಅಲ್ಲವೇ? ಅದಕ್ಯಾಕೆ ಇಷ್ಟು ಭಾವುಕರಾಗಬೇಕು, ಕೆರಳಬೇಕು?’ ಎಂದು ತಳ್ಳಿಹಾಕುವಂಥ ಪ್ರಶ್ನೆಯಲ್ಲ ಇದು. ಲೋಕಸಭೆ ಚುನಾವಣೆ ಮತ್ತು ದೇಶದ ಅಷ್ಟೂ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮಾತ್ರವಲ್ಲದೆ, ವಿವಿಧ ಸ್ತರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ಪರಿಗಣಿಸಿ ನೋಡಿದರೆ, ನೇಪಥ್ಯದಲ್ಲಿ ಯಾವ ಮಟ್ಟಿಗೆ ಇಂಥ ‘ದುಡ್ಡಿನ ವ್ಯವಹಾರ’ ನಡೆಯುತ್ತಿರಬಹುದು? ಎಂದು ಲೆಕ್ಕಿಸಬಹುದು. ಛೇ, ಭಾರತ ಇನ್ನೂ ಪ್ರಬುದ್ಧನಾಗಬೇಕಿದೆ...