ಐಲುಪೈಲಿಗೆ ಮತ್ತೊಂದು ಅಧ್ಯಾಯ
ಟ್ರಂಪ್ ಅವರು ತಮ್ಮ ಹುದ್ದೆಯ ಘನತೆಯನ್ನು ಅರಿತು ಇನ್ನಾದರೂ ‘ತೂಕ’ವಾಗಿ ನಡೆದುಕೊಳ್ಳ ದಿದ್ದರೆ, ಒಂದಿಡೀ ವಿಶ್ವದ ಜನರು ಅವರನ್ನು ‘ಹಗುರ’ವಾಗಿ ಪರಿಗಣಿಸುವ ದಿನಗಳು ದೂರವಿಲ್ಲ. ಮಾತ್ರ ವಲ್ಲ, ವಿವಿಧ ದೇಶಗಳ ರಾಜತಾಂತ್ರಿಕ ವಲಯವೂ ಅವರನ್ನು ಗಂಭೀರವಾಗಿ ಲೆಕ್ಕಿಸದೆ ಹೋಗುವ ಸಾಧ್ಯತೆಗಳೂ ಇವೆ...

-

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಮುಹಮದ್-ಬಿನ್ -ತುಘಲಕ್’ನ ಅಪರಾವ ತಾರವಾಗಿದ್ದಾರೆ ಅಂತ ಅವರಿವರು ಆಡಿಕೊಳ್ಳುವುದನ್ನು ಸಾಬೀತು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಟ್ರಂಪ್ ಮಹಾಶಯರು. ‘ಶೇ.200ರಷ್ಟು ಸುಂಕದ ಬೆದರಿಕೆ ಹಾಕಿ ನಾನು ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದೆ; ಯುದ್ಧವನ್ನು ನಿಲ್ಲಿಸುವಲ್ಲಿ ನಾನು ನಿಪುಣ’ ಎಂದು ಮೊನ್ನೆ ಯಷ್ಟೇ ಬಡಾಯಿ ಕೊಚ್ಚಿಕೊಂಡಿದ್ದ ಈ ಉತ್ತರಕುಮಾರ, ಈಗ ತಮ್ಮ ಐಲುಪೈಲಿನ ನಡೆಗೆ ಮತ್ತೊಂದು ಅಧ್ಯಾಯವನ್ನು ಸೇರಿಸಿಕೊಂಡಿದ್ದಾರೆ.
‘ಭಾರತವು ಇನ್ನು ಮುಂದೆ ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವುದಿಲ್ಲ ಎಂದು ಸ್ವತಃ ಪ್ರಧಾನಮಂತ್ರಿ ಮೋದಿಯವರೇ ನನಗೆ ಭರವಸೆ ನೀಡಿದ್ದಾರೆ’ ಎಂಬ ಆಣಿಮುತ್ತನ್ನು ಅವರು ಉದುರಿಸಿರುವುದು ಇದಕ್ಕೆ ಸಾಕ್ಷಿ!
ಇದನ್ನೂ ಓದಿ: Vishwavani Editorial: ವನ್ಯಜೀವಿಗಳಿಗಿದು ಕಾಲವಲ್ಲ
ಆದರೆ, ಈ ಹೇಳಿಕೆಯನ್ನು ಅಲ್ಲಗಳೆದಿರುವ ಭಾರತದ ವಿದೇಶಾಂಗ ಸಚಿವಾಲಯ, ಇತ್ತೀಚೆಗೆ ಮೋದಿಯವರು ಮತ್ತು ಟ್ರಂಪ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ, ದೂರವಾಣಿ ಸಂವಹನವೂ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಗಾದರೆ, ಟ್ರಂಪ್ ಹೀಗೆ ಮತ್ತೆ ಮತ್ತೆ ಎಡವುತ್ತಿರುವುದೇಕೆ? ‘ಒಂದೇ ಸುಳ್ಳನ್ನು ನೂರುಬಾರಿ ಹೇಳಿದರೆ ಅದು ಸತ್ಯವಾಗಿಬಿಡುತ್ತದೆ’ ಎಂಬ ವಿಲಕ್ಷಣ ಸಿದ್ಧಾಂತಕ್ಕೆ ಟ್ರಂಪ್ ಮಹಾಶಯರು ಆಜೀವ ಚಂದಾದಾರ ಆಗಿಬಿಟ್ಟಿದ್ದಾರಾ? ಅಥವಾ ನೊಬೆಲ್ ಶಾಂತಿ ಪುರಸ್ಕಾರ ಸಿಗದಿರುವುದು ಅವರನ್ನು ಹತಾಶೆಯ ಕೂಪಕ್ಕೆ ತಳ್ಳಿ ಹೀಗೆಲ್ಲಾ ಮಾತಾಡಿಸುತ್ತಿದೆಯಾ? ಎಂಬುದನ್ನು ಬಲ್ಲವರಷ್ಟೇ ಹೇಳಬೇಕು.
ಟ್ರಂಪ್ ಅವರು ತಮ್ಮ ಹುದ್ದೆಯ ಘನತೆಯನ್ನು ಅರಿತು ಇನ್ನಾದರೂ ‘ತೂಕ’ವಾಗಿ ನಡೆದುಕೊಳ್ಳ ದಿದ್ದರೆ, ಒಂದಿಡೀ ವಿಶ್ವದ ಜನರು ಅವರನ್ನು ‘ಹಗುರ’ವಾಗಿ ಪರಿಗಣಿಸುವ ದಿನಗಳು ದೂರವಿಲ್ಲ. ಮಾತ್ರವಲ್ಲ, ವಿವಿಧ ದೇಶಗಳ ರಾಜತಾಂತ್ರಿಕ ವಲಯವೂ ಅವರನ್ನು ಗಂಭೀರವಾಗಿ ಲೆಕ್ಕಿಸದೆ ಹೋಗುವ ಸಾಧ್ಯತೆಗಳೂ ಇವೆ...