ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಟ್ರೋಫಿ ವಿಜಯದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರಕಾರ ‘ಕ್ಲೀನ್ ಚಿಟ’ ನೀಡಿದೆ. ಅಂದಿನ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಡಿಸಿಪಿ ಶೇಖರ್ ಟೆಕ್ಕಣ್ಣವರ್ ಅವರನ್ನು ಆರೋಪ ಮುಕ್ತಗೊಳಿಸ ಲಾಗಿದೆ.
2025ರ ಜೂನ್ 4ರಂದು ನಡೆದ ದುರ್ಘಟನೆಯಲ್ಲಿ 11 ಮಂದಿ ಜೀವ ತೆತ್ತಿದ್ದರು. ಅಮಾನತಿನ ನಂತರ ಈ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು ಮತ್ತು ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು. ಸಕ್ಷಮ ಪ್ರಾಧಿಕಾರವು, ಅಧಿಕಾರಿಗಳ ವಿರುದ್ಧದ ತನಿಖೆಯನ್ನು ಮುಂದು ವರಿಸುವ ಅಗತ್ಯವಿಲ್ಲ ಎಂದು ನಿರ್ಧರಿಸಿದೆ.
ಇದನ್ನೂ ಓದಿ: Chinnaswamy Stadium: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತು ಪರಿಶೀಲನೆಗೆ ಸಮಿತಿ ರಚನೆ
ಅಲ್ಲಿಗೆ, 11 ಮಂದಿ ಕ್ರೀಡಾಭಿಮಾನಿಗಳ ಸಾವು ಕೈಯಾರೆ ತಂದುಕೊಂಡ ದುರಂತ, ಅದಕ್ಕೆ ಯಾರೂ ಹೊಣೆಯಲ್ಲ, ಎಂದು ಸರಕಾರವೇ ನಿರ್ಧರಿಸಿ ಅಚ್ಚುಕಟ್ಟಾಗಿ ಕೈ ತೊಳೆದುಕೊಂಡಿದೆ. ಸತ್ತವರು ಪ್ರಾಣ ಬಿಟ್ಟದ್ದೇ ಬಂತು, ಅವರ ಕುಟುಂಬಕ್ಕೆ ಸರಿಯಾದ ಪರಿಹಾರ ಸಿಕ್ಕಿತೋ ಇಲ್ಲವೋ ಅದೂ ತಿಳಿದಿಲ್ಲ. ಪರಿಹಾರ ದೊರೆತರೆ ಹೋದ ಜೀವ ಬಂದಂತಲ್ಲ, ಆ ಮಾತು ಬೇರೆ. ಹಾಗಾದರೆ 11 ಮಂದಿಯ ಸಾವಿಗೆ ಕಾರಣ ಯಾರು? ತರಾತುರಿಯಲ್ಲಿ ಎರಡೆರಡು ಕಡೆ ಕಾರ್ಯಕ್ರಮ, ವಿಜಯ ಯಾತ್ರೆ ಏರ್ಪಡಿಸಿ, ವೇದಿಕೆ ಮೇಲೇರಿ ಟ್ರೋಫಿ ಹಿಡಿದು ಫೋಟೋ ತೆಗೆಸಿಕೊಂಡವರು ಯಾರು? ಭದ್ರತಾ ವೈಫಲ್ಯ ಯಾರಿಂದಾಯಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬೇ ಕಾದ ಸರಕಾರ ಮರಳಿನಲ್ಲಿ ತಲೆ ಹುದುಗಿಸಿಕೊಂಡ ಉಷ್ಟ್ರ ಪಕ್ಷಿಯಂತೆ ವರ್ತಿಸುತ್ತಿದೆ.
ಕರೋನಾ ಕಾಯಿಲೆಯ ಕಾಲದಲ್ಲಿ ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ಕೊರತೆ ದುರಂತದಲ್ಲಿ 36 ಮಂದಿ ಮೃತಪಟ್ಟಿದ್ದರು. ಅಲ್ಲೂ ನ್ಯಾಯಾಂಗ ತನಿಖೆ ನಡೆದು ಕೆಳಹಂತದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಮುಖ್ಯ ಪಾತ್ರ ವಹಿಸಿದ್ದ ಜಿಲ್ಲಾಡಳಿತ, ಆಸ್ಪತ್ರೆ ಅಧಿಕಾರಿಗಳು ಪಾರಾಗಿದ್ದರು. ಇವೆಲ್ಲವುಗಳ ಹೊಣೆ ಹೊರಬೇಕಿದ್ದ ಯಾವ ದೊಡ್ಡ ತಲೆಯೂ ಉರುಳಲಿಲ್ಲ. ಮೇಲುಸ್ತರದ ಹೊಣೆಗಾರರು ಹೀಗೆ ಪಾರಾಗುತ್ತ ಹೋಗುವುದು, ಕೆಳಹಂತದ ವಾಚ್‌ಮನ್ ಮಟ್ಟದವರ ತಲೆದಂಡ ಮಾಡುವುದು ಮಾಮೂಲಿ ಎನಿಸಿಕೊಂಡಿದೆ. ಇದು ಹೊಣೆರಹಿತ ಪ್ರಜಾ ಪ್ರಭುತ್ವದ, ಕೈಕೊಟ್ಟ ನ್ಯಾಯ ವ್ಯವಸ್ಥೆಯ ಲಕ್ಷಣ.