ದೇಶದಲ್ಲಿ ಪೆಟ್ರೊಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ 3 ರೂ. ಗಳಷ್ಟು ಏರಿಸಲಾಗಿದೆ. ತೈಲ ಕಂಪನಿಗಳು ದೇಶದಾದ್ಯಂತ ಈ ಏರಿಕೆ ಮಾಡಿದ್ದು, ಇದರ ಜೊತೆಗೆ ಸಿಎನ್‌ಜಿಯ ಬೆಲೆಯೂ ಏರಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 3.26 ರೂ. ಹಾಗೂ ಡೀಸೆಲ್ ಬೆಲೆ 3.12 ರೂ. ಹೆಚ್ಚಳವಾಗಿದೆ.
ಶ್ರೀಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ‘ಮಿತವ್ಯಯ ಮಾಡಿ’ ಎದು ಪ್ರಧಾನಿಯವರು ಮೊನ್ನೆ ವಿನಂತಿ ಮಾಡಿದ ಬೆನ್ನಲ್ಲೇ ಚಿನ್ನದ ಮೇಲಿನ ಆಮದು ಸುಂಕವನ್ನು ಏರಿಸಿದ್ದರು. ಇದೀಗ ತೈಲ ಬೆಲೆಯೂ ಏರಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದು ಗಾಯದ ಮೇಲೆಳೆದ ಬರೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ, ಹೊರ್ಮುಜ್ ಬಿಕ್ಕಟ್ಟು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವಿದು. ದೇಶದಲ್ಲಿ ಇಂಧನ ಪೂರೈಕೆ ಸಮಸ್ಯೆ ಇಲ್ಲ, 60 ದಿನಗಳಿಗೆ ಬೇಕಾದಷ್ಟು ತೈಲ ಸಂಗ್ರಹಣೆ ಹಾಗೂ 45 ದಿನಗಳಿಗೆ ಬೇಕಾದಷ್ಟು ಎಲ್‌ಪಿಜಿ ಸಂಗ್ರಹವಿದೆ ಎನ್ನಲಾಗಿತ್ತು.
ಇದನ್ನೂ ಓದಿ: Vishwavani Editorial: ಇದು ಸ್ವರ್ಣ ಕಾಲವಲ್ಲ
ಇದೀಗ ತೈಲ ಬೆಲೆ ಏರಿಕೆಯಿಂದ ಉಂಟಾದ ನಷ್ಟದಿಂದ ಪಾರಾಗಲು ತೈಲ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಈ ಬೆಲೆ ಏರಿಕೆ ಖಂಡಿತವಾಗಿಯೂ ಸರಪಣಿ ಪರಿಣಾಮ ಉಂಟಾಗಿಸಲಿದೆ. ಡೀಸೆಲ್ ಬೆಲೆ ಹೆಚ್ಚಾಗುವುದರ ನೇರ ಪರಿಣಾಮ ಸರಕು ಸಾಗಣೆ ವಾಹನಗಳ ಮೇಲೆ. ಇದರಿಂದ ತರಕಾರಿ, ಹಣ್ಣು ಮತ್ತು ಇತರೆ ದಿನಬಳಕೆಯ ವಸ್ತುಗಳ ಸಾಗಣೆ ವೆಚ್ಚ ಹೆಚ್ಚಾಗಿ, ಮಾರುಕಟ್ಟೆಗಳಲ್ಲಿ ಇವುಗಳ ಬೆಲೆ ಕೂಡ ಏರಿಕೆಯಾಗಲಿದೆ.
ತೈಲ ಬೆಲೆ ಏರಿಕೆಯ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರು ಟಿಕೆಟ್ ದರದಲ್ಲಿ ಶೇ. 20ರಷ್ಟು ಹೆಚ್ಚಳ ಮಾಡಿವೆ. ಸಿಎನ್‌ಜಿ ದರವೂ ಏರಿಕೆಯಾಗಿರುವುದರಿಂದ ಆಟೋ ದರದಲ್ಲಿಯೂ ಏರಿಕೆಯಾಗುವ ಸಾಧ್ಯತೆಯಿದೆ. ರೂಪಾಯಿ ಮೌಲ್ಯ ಕುಸಿತವಾಗಿ ಹಣದುಬ್ಬರ ಏರಿರುವುದರಿಂದ ಮುಂದಿನ ದಿನಗಳನ್ನು ಸಾಮಾನ್ಯರ ಬದುಕು ದುಸ್ತರವಾಗಲಿದೆ. ಎರಡು ವರ್ಷಗಳ ಹಿಂದೆ ಅಂದರೆ 2024ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 2 ರೂ. ಕಡಿತಗೊಳಿಸಲಾಗಿತ್ತು. ಆದರೆ ಈ ದರ ಇಳಿಕೆಯ ಲಾಭ ಗ್ರಾಹಕರಿಗೆ ಸಿಕ್ಕಿರುವುದು ಅನುಮಾನ.
ಇದೀಗ ಏರಿಕೆಯ ದುಷ್ಫಲವನ್ನಂತೂ ಪ್ರತಿಯೊಬ್ಬನೂ ಉಣ್ಣಬೇಕಾಗುತ್ತದೆ. ಮುಂದಿನ ದಿನಗಳು ಇನ್ನಷ್ಟು ಕಷ್ಟಕರವಾಗಿರಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದರು. ಪ್ರಜೆಗಳು ಮಿತವ್ಯಯ, ಸರಳ ಬದುಕು, ಉಳಿತಾಯದ ಹಾದಿಗಳನ್ನು ನೆಚ್ಚಿಕೊಳ್ಳದೆ ನಿರ್ವಾಹವಿಲ್ಲದಾಗಿದೆ.