ಮುಂಬಯಿ, ಆ.14: ಭಾರತದ ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಅವರಿಗೆ ಘೋಷಣೆಯಾದ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ಇದುವರೆಗೆ ಅವರಿಗೆ ಸಿಕ್ಕಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರಶಸ್ತಿ ಘೋಷಣೆಯಾಗಿ 53 ವರ್ಷ ಕಳೆದರೂ ತಮಗೆ ಪದಕ ಮತ್ತು ಪ್ರಮಾಣಪತ್ರ ಸಿಕ್ಕಿಲ್ಲ ಎಂದು ಸ್ವತಃ 88 ವರ್ಷದ ಫಾರೂಕ್ ಇಂಜಿನಿಯರ್ ದಿ ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
1961 ಮತ್ತು 1975 ರ ನಡುವೆ 46 ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಿದ ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಎಂಜಿನಿಯರ್ ಆ ಸಮಯವನ್ನು ನೆನಪಿಸಿಕೊಳ್ಳುತ್ತಾ, ತಂಡದ ವ್ಯವಸ್ಥಾಪಕರು ಪದ್ಮಶ್ರೀ ಗೌರವದ ಬಗ್ಗೆ ತಮಗೆ ತಿಳಿಸಿದ್ದರು, ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಸಂವಹನ ಬಂದಿಲ್ಲ ಎಂದು ಹೇಳಿದರು.
"ಪ್ರಶಸ್ತಿ ಘೋಷಣೆಯಾದ ಸಮಯದಲ್ಲಿ ನಾನು ಇಂಗ್ಲೆಂಡ್‌ನಲ್ಲಿ ಆಡುತ್ತಿದ್ದೆ. ನಮ್ಮ ತಂಡದ ವ್ಯವಸ್ಥಾಪಕ ಹೇಮು ಅಧಿಕಾರಿ ನನಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಿದೆ ಎಂದು ಮಾಹಿತಿ ನೀಡಿದರು. ಅದು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ ಈ ನಿಟ್ಟಿನಲ್ಲಿ ನನಗೆ ಯಾವುದೇ ಸಂವಹನ ಅಥವಾ ಸೂಚನೆ ಬಂದಿಲ್ಲ. ಅಂದಿನಿಂದ ನಾನು ನನ್ನ ಪ್ರಶಸ್ತಿಯನ್ನು ಪಡೆಯಲು ಕಾಯುತ್ತಿದ್ದೇನೆ" ಎಂದು ಎಂಜಿನಿಯರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
"ಆ ದಿನಗಳಲ್ಲಿ, ಪತ್ರಿಕೆಗಳೇ ಮಾಹಿತಿಯ ಏಕೈಕ ಮೂಲವಾಗಿದ್ದವು. ಭಾರತ ಸರ್ಕಾರದಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ನಾನು ಹೇಮುಗೆ ಹೇಳಿದೆ, ಮತ್ತು ಅವರು ನನಗೆ ಅಧಿಕೃತವಾಗಿ ಮಾಹಿತಿ ಬರಲಿದೆ ಎಂದು ಹೇಳಿದರು. ಆದರೆ ಇಲ್ಲಿಯವರೆಗೆ ನನಗೆ ಏನೂ ಕೇಳಿಬಂದಿಲ್ಲ" ಎಂದು ಅವರು ಹೇಳಿದರು.
ಎಂಜಿನಿಯರ್ ಅವರು ಈ ಹಿಂದೆ ಅರುಣ್ ಜೇಟ್ಲಿ ಮತ್ತು ಇತ್ತೀಚೆಗೆ, ಪ್ರಸ್ತುತ ಐಸಿಸಿ ಅಧ್ಯಕ್ಷ ಜಯ್ ಶಾ ಅವರನ್ನು ಸಂಪರ್ಕಿಸಿದ್ದರು. ಅವರು ಸಹಾಯದ ಭರವಸೆ ನೀಡಿದ್ದಾರೆ ಎಂದು ಹೇಳಿದರು.
"ಯಾರಿಗೆ ಈ ಬಗ್ಗೆ ಪತ್ರ ಬರೆಯಬೇಕೆಂದು ನನಗೆ ತಿಳಿದಿರಲಿಲ್ಲ ಮತ್ತು ವರ್ಷಗಳಿಂದ ಕಾಯುತ್ತಾ ಕುಳಿತಿದ್ದೆ. ಸರ್ಕಾರದಿಂದ ಯಾರಾದರೂ ಕರೆ ಮಾಡಿ ನನಗೆ ತಿಳಿಸುತ್ತಾರೆ ಎಂದು ನಾನು ಭಾವಿಸಿದೆ. ಅರುಣ್ ಜೇಟ್ಲಿಜಿ (ಮಾಜಿ ಕೇಂದ್ರ ಸಚಿವ ಮತ್ತು ಮಾಜಿ ಬಿಸಿಸಿಐ ಉಪಾಧ್ಯಕ್ಷ) ಅವರು ಸಾಯುವ ಮೊದಲು ನಾನು ಅವರಿಗೆ ತಿಳಿಸಿದ್ದೆ. ಇತ್ತೀಚೆಗೆ, ನಾನು ಜಯ್ ಶಾ (ಐಸಿಸಿ ಅಧ್ಯಕ್ಷರು) ಅವರಿಗೆ ಪತ್ರ ಬರೆದಿದ್ದೆ. ಕಳೆದ ತಿಂಗಳು, ಅವರು ನನಗೆ ಸಹಾಯ ಮಾಡುವುದಾಗಿ ಹೇಳಿದರು" ಎಂದು ಎಂಜಿನಿಯರ್ ಹೇಳಿದರು.
ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಬಾರಿಸಿ ದಾಖಲೆ ಬರೆದ ತಾಂಜಿದ್ ಹಸನ್; ಉತ್ತಮ ಮೊತ್ತ ಕಲೆಹಾಕಿದ ಬಾಂಗ್ಲಾದೇಶ
ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಎಂಜಿನಿಯರ್, ಈ ಪ್ರಶಸ್ತಿ ತನಗೆ ತುಂಬಾ ಮಹತ್ವದ್ದಾಗಿದೆ ಮತ್ತು ಅದನ್ನು ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಲ್ಪಟ್ಟರೆ ಸಂತೋಷವಾಗುತ್ತದೆ ಎಂದು ಹೇಳಿದರು.
"ನನಗೆ ಈಗ 88 ವರ್ಷ, ಶೀಘ್ರದಲ್ಲೇ ಅದನ್ನು ಸ್ವೀಕರಿಸುವ ಭರವಸೆ ಇದೆ" ಎಂದು ಅವರು ಹೇಳಿದರು. ಬಿಸಿಸಿಐ ಎಂಜಿನಿಯರ್ ಅವರ ಹೇಳಿಕೆಯನ್ನು ಗಮನಿಸಿದ್ದು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯುವ ನಿರೀಕ್ಷೆಯಿದೆ.
ಪದ್ಮಶ್ರೀ ಪ್ರಶಸ್ತಿ ಎಂದರೇನು?
ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರವು ವಾರ್ಷಿಕವಾಗಿ ಕಲೆ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ವೈದ್ಯಕೀಯ ಮತ್ತು ಸಾಮಾಜಿಕ ಸೇವೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಗುರುತಿಸಿ ನೀಡುತ್ತದೆ. ಪ್ರಶಸ್ತಿ ವಿಜೇತರಿಗೆ ಭಾರತದ ರಾಷ್ಟ್ರಪತಿಗಳು ಸಹಿ ಮಾಡಿದ ಸನದ್ (ಪ್ರಮಾಣಪತ್ರ) ಮತ್ತು ಪದಕವನ್ನು ನೀಡಲಾಗುತ್ತದೆ. ಯಾವುದೇ ನಗದು ಬಹುಮಾನ ಅಥವಾ ಭತ್ಯೆ ಒಳಗೊಂಡಿರುವುದಿಲ್ಲ.