ಹ್ಯಾಮಿಲ್ಟನ್, ನ.1: ಎಲ್ಲರನ್ನೂ ಸಂತೋಷಪಡಿಸುವುದು ನನ್ನ ಕೆಲಸವಲ್ಲ. ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಲ್ಲ, ಬದಲಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದೇ ನನ್ನ ಕೆಲಸ. ಅದಕ್ಕಾಗಿಯೇ ನಾನು ಇಲ್ಲಿದ್ದೇನೆ ಎಂದು ಹೇಳುವ ಮೂಲಕ ಕೋಚ್ ಗೌತಮ್ ಗಂಭೀರ್ ತಮ್ಮ ವಿರುದ್ಧದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯಕ್ಕಾಗಿ ಭಾರತವು ವೈಭವ್ ಸೂರ್ಯವಂಶಿಯನ್ನು ಮತ್ತೊಮ್ಮೆ ತಮ್ಮ ಆಡುವ ಬಳಗದಿಂದ ಹೊರಗಿಟ್ಟಿತು. ಭಾರತದ ಪಾಲಿಗೆ ಈ ಪಂದ್ಯವು ಕೇವಲ ಔಪಚಾರಿಕವಾಗಿದ್ದರೂ ಸಹ, ವೈಭವ್ಗೆ ಅವಕಾಶ ಸಿಗಲಿಲ್ಲ. ಇದರ ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್ ವಿರುದ್ಧ ಟೀಕೆಗಳು ವ್ಯಕ್ತವಾದವು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಗಂಭೀರ್, "ಜನಪ್ರಿಯ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಸುಲಭ. ಆದರೆ ನನ್ನ ಪ್ರಕಾರ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಮತ್ತು ಡ್ರೆಸ್ಸಿಂಗ್ ರೂಮ್ನೊಳಗೆ ಭದ್ರತೆಯ (ಭರವಸೆಯ) ವಾತಾವರಣವಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ," ಎಂದು ಅವರು ಹೇಳಿದರು.
ಭಾರತ ವಿರುದ್ಧದ ಅಂತಿಮ ಟಿ20; ನ್ಯೂಜಿಲೆಂಡ್ಗೆ 7 ವಿಕೆಟ್ ಜಯ
ಭಾರತೀಯ ತಂಡದಲ್ಲಿ ಪ್ರತಿಭೆಗಳ ಸಮೃದ್ಧಿ ಇದೆ ಎಂಬುದನ್ನು ಗಂಭೀರ್ ಒಪ್ಪಿಕೊಂಡರು, ಆದರೆ ದೀರ್ಘಕಾಲದವರೆಗೆ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೆ ತಂಡದಲ್ಲಿ ಹೆಚ್ಚು ಕಾಲ ಅವಕಾಶ ಸಿಗಬೇಕು ಎಂದು ಹೇಳಿದರು.
"ಇಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆದರೆ, ಆಟಗಾರರು ದೀರ್ಘಕಾಲದವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದು ಮುಖ್ಯ. ಸಹಜವಾಗಿಯೇ, ಅವರಿಗೆ ಇನ್ನಷ್ಟು ಅವಕಾಶಗಳನ್ನು ನೀಡಬೇಕಾಗುತ್ತದೆ. ಈ ಸರಣಿಯನ್ನು ನಾವು ಇದೇ ದೃಷ್ಟಿಕೋನದಿಂದಲೇ ನೋಡುತ್ತಿದ್ದೇವೆ," ಎಂದು ಅವರು ಹೇಳಿದರು.
ಸೂರ್ಯವಂಶಿ ಸರಣಿಯಲ್ಲಿ ಆರಂಭಿಕ ಬ್ಯಾಟರ್ಗೆ ಪರ್ಯಾಯ ಆಯ್ಕೆಯಾಗಿ ಸೇರ್ಪಡೆಗೊಂಡರು, ಆದರೆ ಇಶಾನ್ ಕಿಶನ್ ತೊಡೆಯ ಸ್ನಾಯುವಿನ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದ ನಂತರವಷ್ಟೇ ಅವರಿಗೆ ಅವಕಾಶಗಳು ಸಿಕ್ಕವು. ಈ ಹದಿಹರೆಯದ ಆಟಗಾರ ಎರಡು ಪಂದ್ಯಗಳನ್ನು ಆಡಿದರು ಅವರ ಮೊದಲ ಇನ್ನಿಂಗ್ಸ್ನಲ್ಲಿ ಅವರು ಗಳಿಸಿದ್ದು ಒಂದಂಕಿಯ ಮೊತ್ತವಷ್ಟೇ.
ಮೂರನೇ ಟಿ20 ಪಂದ್ಯದಲ್ಲಿ ಅವರು ಸ್ಫೋಟಕ 45 ರನ್ಗಳನ್ನು ಗಳಿಸಿದರು. ಭಾರತದ ವಿಶ್ವ ದಾಖಲೆಯ ಪವರ್ಪ್ಲೇ ಜೊತೆಯಾಟದ ವೇಳೆ ಅವರು ಅಭಿಷೇಕ್ ಶರ್ಮಾ ಅವರೊಂದಿಗೆ ಕ್ರೀಸ್ ಹಂಚಿಕೊಂಡಿದ್ದರು. ಆದಾಗ್ಯೂ, ಇಶಾನ್ ಕಿಶನ್ ತಂಡಕ್ಕೆ ಮರಳಿದ ಕಾರಣ, ನಂತರದ ಪಂದ್ಯಗಳಿಂದ ಸೂರ್ಯವಂಶಿ ಅವರನ್ನು ಕೈಬಿಡಲಾಯಿತು.