ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಕುರಿತು ಸೋಮವಾರ ಭಾರತೀಯ ಸೇನಾಪಡೆಗಳ ಮುಖ್ಯಸ್ಥರು ನಡೆಸಿದಿದ್ದ ಸುದ್ದಿಗೋಷ್ಠಿಯ ವೇಳೆ ವಿರಾಟ್ ಕೊಹ್ಲಿ ಅವರ ಟೆಸ್ಟ್ ನಿವೃತ್ತಿ ಬಗ್ಗೆಯೂ ಮಾತನಾಡಲಾಯಿತು. ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, ಇಂದು ಕ್ರಿಕೆಟ್ ಕುರಿತು ಮಾತನಾಡುವ ದಿನವಲ್ಲ ಆದರೆ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿದೆ. ಎಲ್ಲ ಭಾರತೀಯರಂತೆ ನಾನೂ ಸಹ ಅವರ ಅಭಿಮಾನಿ ಎಂದು ತಿಳಿಸಿದರು. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸೋಮವಾರ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತನ್ನ ನಿವೃತ್ತಿ ಸುದ್ದಿಯನ್ನು ಪ್ರಕಟಿಸಿದರು. ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆಡಿದ 123 ಪಂದ್ಯಗಳಿಂದ 46.85ರ ಸರಾಸರಿಯಲ್ಲಿ 9230 ರನ್‌ಗಳನ್ನು ಕಲೆ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನೀಲ್ ಗವಾಸ್ಕರ್ ನಂತರ ಕೊಹ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 30 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನೀಲ್ ಗವಾಸ್ಕರ್ ಬಳಿಕ ಭಾರತದ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ ವಿರಾಟ್ ಕೊಹ್ಲಿ. ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕೊಹ್ಲಿ 15ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 7 ದ್ವಿಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಡಾನ್ ಬ್ರಾಡ್ಮನ್ (12 ದ್ವಿಶತಕ) ಅಗ್ರ ಸ್ಥಾನದಲ್ಲಿದ್ದಾರೆ. 2017ರಲ್ಲಿ ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ ಸತತ ಎರಡು ಬಾರಿ ದ್ವಿಶತಕವನ್ನು ಬಾರಿಸಿದ್ದರು.