ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪದ್ಮ ಪ್ರಶಸ್ತಿ ಪಡೆದ ಕ್ರೀಡಾಪಟುಗಳ ಸಾಧನೆ, ಪರಿಚಯ

Padma Awards 2026: ಭಾರತೀಯ ಕುಸ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಪ್ರಮುಖ ಶಿಲ್ಪಿ, ಭಾರತಕ್ಕೆ ನಾಲ್ಕು ಒಲಿಂಪಿಕ್ ಪದಕಗಳನ್ನು ತಂದುಕೊಟ್ಟ ಜಾರ್ಜಿಯಾದ ಕೋಚ್‌ ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ ಅವರಿಗೆ ಮರಣೋತ್ತರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ.

padma awards 2026 sports

ನವದೆಹಲಿ, ಜ.25: 2026 ರ ಪದ್ಮ ಪ್ರಶಸ್ತಿಗಳ(Padma Awards 2026) ಪಟ್ಟಿ ಬಿಡುಗಡೆಯಾಗಿದ್ದು, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ವಿಭಾಗಗಳಲ್ಲಿ ಒಟ್ಟು 131 ನಾಗರಿಕ ಗೌರವಗಳನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಸಾರ್ವಜನಿಕ ಜೀವನ, ಕಲೆ, ಸಿನಿಮಾ, ಸಾಹಿತ್ಯ, ಕ್ರೀಡೆ ಮತ್ತು ಸಾರ್ವಜನಿಕ ಸೇವೆಯ ಗಣ್ಯ ವ್ಯಕ್ತಿಗಳು ಸೇರಿದ್ದಾರೆ. ಈ ವರ್ಷದ ಗೌರವಗಳಲ್ಲಿ ಐದು ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಈ ಬಾರಿ 9 ಕ್ರೀಡಾಪಟುಗಳು(padma awards 2026 sports) ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಪರಿಚಯ, ಸಾಧನೆಯ ಇಣುಕು ನೋಟ ಇಲ್ಲಿದೆ.

ವಿಜಯ್ ಅಮೃತರಾಜ್

ಭಾರತದ ಮಾಜಿ ಟೆನಿಸ್ ಆಟಗಾರ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆಯುತ್ತಿರುವ ಏಕೈಕ ಕ್ರೀಡಾಪಟು. ಪಸ್ತುತ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ 72 ವರ್ಷದ ಮಾಜಿ ಟೆನಿಸ್ ತಾರೆಗೆ ಈ ಹಿಂದೆ 1983 ರಲ್ಲಿ ಪದ್ಮಶ್ರೀ ಮತ್ತು 1974 ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ರೋಹಿತ್‌ ಶರ್ಮ

ಭಾರತ ಪುರುಷರ ಕ್ರಿಕೆಟ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದಿದೆ. ವಿಶ್ವ ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್‌ ಎಂದು ಕರೆಸಿಕೊಳ್ಳುವ ರೋಹಿತ್‌, ತಮ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ ತಲುಪಿಸಿದ್ದರು. 38 ವರ್ಷದ ರೋಹಿತ್ ಇತ್ತೀಚೆಗೆ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತರಾದರು. ಸದ್ಯ ಏಕದಿನ ಸ್ವರೂಪದಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಏಕದಿನದಲ್ಲಿ ಮೂರು ದ್ವಿಶತಕ ಬಾರಿಸಿದ ವಿಶ್ವ ದಾಖಲೆಯೂ ಅವರ ಹೆಸರಿನಲ್ಲಿದೆ. ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್‌

ಚೊಚ್ಚಲ ಏಕದಿನ ವಿಶ್ವಕಪ್‌ ಗೆಲ್ಲಿಸಿಕೊಟ್ಟ ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 4, ಟಿ20 ವಿಶ್ವಕಪ್‌ನಲ್ಲಿ 8 ಬಾರಿ ಭಾರತವನ್ನು ಪ್ರತಿನಿಧಿಸಿದ್ದರೂ ಹರ್ಮನ್‌ಗೆ ಟ್ರೋಫಿ ಸಿಕ್ಕಿರಲಿಲ್ಲ. 13ನೇ ಪ್ರಯತ್ನದಲ್ಲಿ, ತಮ್ಮ 36ನೇ ವರ್ಷದಲ್ಲಿ ಕಪ್‌ ಗೆದ್ದು ಇತಿಹಾಸ ನಿರ್ಮಿಸಿದ್ದರು. ಅಂದಹಾಗೆ ಕೌರ್‌ ಭಾರತ ಪರ ಒಟ್ಟು 8,393 ರನ್‌ ಬಾರಿಸಿದ್ದಾರೆ. ಈ ವೇಳೆ 8 ಶತಕ ಸಿಡಿಸಿದ್ದಾರೆ.

ಬಲದೇವ್ ಸಿಂಗ್

ಭಾರತ ಹಾಕಿ ದಿಗ್ಗಜರಲ್ಲಿ ಒಬ್ಬರಾದ ಬಲದೇವ್ ಸಿಂಗ್ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದಿದೆ. ಅವರು ಭಾರತೀಯ ಫೀಲ್ಡ್ ಹಾಕಿ ಆಟಗಾರನಾಗಿ 1976 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. 74 ವರ್ಷದ ಅವರು ಭಾರತೀಯ ಮಹಿಳಾ ಹಾಕಿ ತಂಡದ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಹಾಕಿ ವಿಶ್ವಕಪ್‌ನಲ್ಲಿ ತಲಾ ಒಂದು ಬೆಳ್ಳಿ ಮತ್ತು ಕಂಚು, ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದಾರೆ.

ಪ್ರವೀಣ್‌ ಕುಮಾರ್‌

ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ, 39 ವರ್ಷದ ಪ್ರವೀಣ್‌ ಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. 2018ರಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಭಾರತ ಪರ ಮೂರು ಮಾದರಿಯ ಕ್ರಿಕೆಟ್‌ ಆಡಿದ್ದು ಒಟ್ಟು 84 ಪಂದ್ಯಗಳಿಂದ 112 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಐಪಿಎಲ್‌ನಲ್ಲಿ 5 ತಂಡಗಳ ಪರ ಆಡಿ 90 ವಿಕೆಟ್‌ ಪಡೆದಿದ್ದಾರೆ. 2010ರ ಏಷ್ಯಾಕಪ್‌ ಗೆದ್ದ ಭಾರತ ತಂಡದ ಸದಸ್ಯರಾಗಿದ್ದು ಅವರ ಶ್ರೇಷ್ಠ ಸಾಧನೆ.

ಸವಿತಾ ಪುನಿಯಾ

ಭಾರತದ ಮಾಜಿ ನಾಯಕಿ ಮತ್ತು ಅನುಭವಿ ಗೋಲ್‌ಕೀಪರ್ ಸವಿತಾ ಪುನಿಯಾ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅರ್ಜುನ ಪ್ರಶಸ್ತಿ ವಿಜೇತೆ 35 ವರ್ಷದ ಸವಿತಾ ಪುನಿಯಾ ಒಲಿಂಪಿಕ್ಸ್‌ನಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2025ರಲ್ಲಿ ವರ್ಷದ ಗೋಲ್‌ಕೀಪರ್ ಮತ್ತು ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಯೂ ಲಭಿಸಿತ್ತು. ಕಾಮನ್‌ವೆಲ್ತ್‌ನಲ್ಲಿ ಕಂಚು, ಏಷ್ಯಾ ಕಪ್‌ನಲ್ಲಿ ಬೆಳ್ಳಿ, ಕಂಚು(2), ಏಷ್ಯಾ ಕಪ್‌ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು(2) ಪದಕ ಗೆದ್ದಿದ್ದಾರೆ. ಉಳಿದಂತೆ ಏಷ್ಯನ ಚಾಂಪಿಯನ್‌ಶಿಪ್‌ ಟ್ರೋಫಿಯಲ್ಲಿ 3 ಚಿನ್ನ, 2 ಬೆಳ್ಳಿ ಗೆದ್ದಿದ್ದಾರೆ.

ಟಿ20 ವಿಶ್ವಕಪ್ ಆಡಲು ಐಸಿಸಿಯ ಆಹ್ವಾನ ಸ್ವೀಕರಿಸಿದ; ಸ್ಕಾಟ್ಲೆಂಡ್

ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ

ಭಾರತೀಯ ಕುಸ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಪ್ರಮುಖ ಶಿಲ್ಪಿ, ಭಾರತಕ್ಕೆ ನಾಲ್ಕು ಒಲಿಂಪಿಕ್ ಪದಕಗಳನ್ನು ತಂದುಕೊಟ್ಟ ಜಾರ್ಜಿಯಾದ ಕೋಚ್‌ ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ ಅವರಿಗೆ ಮರಣೋತ್ತರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ. 1982-1992ರವರೆಗೆ ಸೋವಿಯತ್ ಒಕ್ಕೂಟದಲ್ಲಿ ತರಬೇತುದಾರರಾಗಿ ಹಲವಾರು ಯುರೋಪಿಯನ್, ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಗಳನ್ನು ತಯಾರಿಸಿದ್ದ ಅವರು, 2003 ರಲ್ಲಿ ಭಾರತಕ್ಕೆ ಬಂದರು. ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಬಜರಂಗ್ ಪುನಿಯಾ ಮತ್ತು ರವಿ ದಹಿಯಾ ಸೇರಿದಂತೆ ಒಲಿಂಪಿಕ್ ಪದಕ ವಿಜೇತರಿಗೆ ತರಬೇತಿ ನೀಡಿದರು. ಇವರನ್ನು ಪ್ರೀತಿಯಿಂದ 'ಲಾಡೊ' ಎಂದು ಕರೆಯಲಾಗುತ್ತಿತ್ತು. ಜೂನ್ 2025 ರಲ್ಲಿ, ವಯೋಸಹಜ ಕಾಯಿಲೆಯಿಂದ 81 ನೇ ವಯಸ್ಸಿನಲ್ಲಿ ನಿಧನರಾದರು.