ಕೋಲ್ಕತಾ, ಎ.19: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ(Ajinkya Rahane) ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ ಅನಪೇಕ್ಷಿತ ದಾಖಲೆಯನ್ನು ನಿರ್ಮಿಸಿದ್ದಾರೆ. ಕೆಕೆಆರ್(KKR vs RR) ತಂಡದ ರನ್ ಚೇಸ್‌ನ ಎರಡನೇ ಓವರ್‌ನಲ್ಲಿ ನಾಂಡ್ರೆ ಬರ್ಗರ್ ಬೌಲಿಂಗ್‌ನಲ್ಲಿ ಔಟಾದ ನಂತರ ರಹಾನೆ ಟೂರ್ನಿಯಲ್ಲಿ ಅತಿ ಹೆಚ್ಚು ಶೂನ್ಯ ಸುತ್ತಿದ ಆರಂಭಿಕ ಆಟಗಾರ ಎಂಬ ಅನಗತ್ಯ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ ಪಾರ್ಥಿವ್ ಪಟೇಲ್(11) ಜತೆ ಜಂಟಿ ದಾಖಲೆ ಹೊಂದಿದ್ದರು. ಇದೀಗ ಅವರು ಅವರನ್ನು ಹಿಂದಿಕ್ಕಿದ್ದಾರೆ. ಒಟ್ಟು 12 ಬಾರಿ ಸೊನ್ನೆಗೆ ಔಟಾಗಿದ್ದಾರೆ.
ಹಾಲಿ ಆವೃತ್ತಿಯಲ್ಲಿ ರಹಾನೆ ಅವರ ಎರಡನೇ ಶೂನ್ಯ ಸಂಪಾದನೆ ಇದಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಕೆಕೆಆರ್‌ನ ಹಿಂದಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಓವರ್‌ನಲ್ಲಿ ಗೋಲ್ಡನ್ ಡಕ್ ಆಗಿದ್ದರು.
ಐಪಿಎಲ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶೂನ್ಯ
12 - ಅಜಿಂಕ್ಯ ರಹಾನೆ
11 - ಪಾರ್ಥಿವ್ ಪಟೇಲ್
10 - ಶಿಖರ್ ಧವನ್
10 - ಗೌತಮ್ ಗಂಭೀರ್
9 - ಡೇವಿಡ್ ವಾರ್ನರ್
ಗೆಲುವಿನ ಖಾತೆ ತೆರೆದ ಕೆಕೆಆರ್
ಸತತ 5 ಪಂದ್ಯಗಳನ್ನು ಸೋತಿದ್ದ ಕೋಲ್ಕತಾ ತಂಡ ಕೊನೆಗೂ 7ನೇ ಪ್ರಯತ್ನದಲ್ಲಿ ಗೆಲುವಿನ ಖಾತೆ ತೆರೆಯಿತು. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ ಅಂತರದ ಗೆಲುವು ಸಾಧಿಸಿತು. ಜತೆಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಒಂದು ಸ್ಥಾನ ಪ್ರಗತಿ ಸಾಧಿಸಿ 9ನೇ ಸ್ಥಾನಕ್ಕೇರಿತು. ಮುಂಬೈ ಕೊನೆಯ ಸ್ಥಾನಕ್ಕೆ ಕುಸಿಯಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಕೆಕೆಆರ್ ನಾಟಕೀಯ ಕುಸಿತದ ಹೊರತಾಗಿಯೂ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್ ಬಾರಿಸಿ ಗೆಲವು ದಾಖಲಿಸಿತು.
KKR vs RR: ರಿಂಕು ಅರ್ಧಶತಕ; ಗೆಲುವಿನ ಖಾತೆ ತೆರೆದ ಕೆಕೆಆರ್
6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಿಂಕು ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 34 ಎಸೆತಗಳಿಂದ 53 ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅನುಕುಲ್ ರಾಯ್ ಅಜೇಯ 29 ರನ್ ಬಾರಿಸಿದರು. ಈ ಜೋಡಿ ಮುರಿಯದ 7ನೇ ವಿಕೆಟ್‌ಗೆ 76 ರನ್‌ಗಳ ಜತೆಯಾಟ ನಡೆಸಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕ್ಯಾಮರೂನ್ ಗ್ರೀನ್ 27, ಪೋವೆಲ್ 23 ರನ್ ಗಳಿಸಿದರು. ರಾಜಸ್ಥಾನ್ ಪರ ರವೀಂದ್ರ ಜಡೇಜಾ 8 ರನ್‌ಗೆ 2 ವಿಕೆಟ್ ಕಿತ್ತರು. ಕೆಕೆಆರ್ ಪರ ವರುಣ್ ಚಕ್ರವರ್ತಿ 3 ವಿಕೆಟ್ ಕಿತ್ತು ಮಿಂಚಿದರು.