ರಾಂಚಿ, ಡಿ.1: ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ(IND vs SA 1st ODI) ಪಂದ್ಯದಲ್ಲಿ ಭಾರತ ತಂಡವು 17 ರನ್‌ಗಳಿಂದ ಗೆದ್ದು ಬೀಗಿತ್ತು. ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ(Virat Kohli) ಶತಕ ಬಾರಿಸಿ ಮಿಂಚಿದ್ದರು. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ,ಬ್ಯಾಟರ್‌ಗಳ ಮಾನಸಿಕ ಸ್ಥಿತಿ ಆಟದ ಮೇಲೆ ಪರಿಣಾಮ ಬೀರುತ್ತದೆ. ಪಂದ್ಯದಲ್ಲಿ ಗೆಲುವು ಸಾಧಿಸಲು ತಯಾರಿಗಿಂತ ಮಾನಸಿಕ ಸ್ಥಿರತೆ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ನನಗೆ 37 ವರ್ಷ, ಆದ್ದರಿಂದ ನಾನು ನನ್ನ ದೇಹದ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ. ನೆಟ್ಸ್‌ನಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದರೆ, ನೀವು ಉತ್ತಮರು ಎಂದು ನಿಮಗೆ ತಿಳಿಯುತ್ತದೆ. ನೀವು ಫಾರ್ಮ್‌ನಲ್ಲಿಲ್ಲದಿದ್ದರೆ, ನೀವು ನೆಟ್ಸ್‌ನಲ್ಲಿ ಹೆಚ್ಚು ಆಡಲು ಬಯಸುತ್ತೀರಿ. ಹಾಗೆಯೇ ಮಾನಸಿಕವಾಗಿ ಸಿದ್ಧರಾಗಿರುವುದು ಮತ್ತು ಆಟದ ಬಗ್ಗೆ ಹೆಚ್ಚು ಉತ್ಸಾಹದಿಂದ ಕೂಡಿರುವುದು ಮುಖ್ಯವಾಗಿದೆ' ಎಂದು ಕೊಹ್ಲಿ ತಿಳಿಸಿದರು.
"ನೀವು ಪರಿಸ್ಥಿತಿಗೆ ಬಂದಾಗ, ಏನು ಮಾಡಬೇಕೆಂದು ನಿಮಗೆ ತಿಳಿದಿದೆ. ಅನುಭವವು ಪ್ರಾರಂಭವಾಗುತ್ತದೆ. ನಾನು ಎಂದಿಗೂ ತಯಾರಿಯಲ್ಲಿ ನಂಬಿಕೆ ಇಟ್ಟವನಲ್ಲ. ನನ್ನ ಎಲ್ಲಾ ಸಿದ್ಧತೆಗಳು ಮಾನಸಿಕವಾಗಿರುತ್ತವೆ. ನನ್ನ ದೈಹಿಕ ಮಟ್ಟಗಳು ಹೆಚ್ಚಿದ್ದರೆ ಮತ್ತು ಮಾನಸಿಕ ತೀಕ್ಷ್ಣತೆ ಇರುವವರೆಗೆ, ಅದು ಉತ್ತಮವಾಗಿದೆ ಎಂದು ನಿಮಗೆ ತಿಳಿಯುತ್ತದೆ" ಎಂದು ಅವರು ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದರು.
ಇದನ್ನೂ ಓದಿ IND vs SA: ಬೃಹತ್ ಮೊತ್ತದ ಮೇಲಾಟದಲ್ಲಿ ಹೋರಾಡಿ ಸೋತ ಹರಿಣ ಪಡೆ
ಪಂದ್ಯದಲ್ಲಿ ಬೊಂಬಾಟ್ ಬ್ಯಾಟಿಂಗ್ ನಡೆಸಿದ ಕೊಹ್ಲಿ 11 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್ ನೆರವಿನಿಂದ 135ರನ್ ಬಾರಿಸಿದರು. ಶತಕ ಸಿಡಿಸುವ ಮೂಲಕ ಹರಿಣಗಳ ವಿರುದ್ದ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ದ ಒಟ್ಟು 6 ಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ರಾಂಚಿ ಮೈದಾನದಲ್ಲಿ ಕೇವಲ 5 ಇನಿಂಗ್ಸ್‌ನಲ್ಲಿ 3 ಶತಕಗಳನ್ನು ಸಿಡಿಸುವ ಮೂಲಕ, ತವರಿನ ಒಂದೇ ಮೈದಾನದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆ ಬರೆದರು. ಸಚಿನ್ ತೆಂಡೂಲ್ಕರ್ ವಡೋದರ ಮೈದಾನದಲ್ಲಿ 7 ಇನಿಂಗ್ಸ್‌ನಲ್ಲಿ 3 ಶತಕ ಬಾರಿಸಿದ್ದರೆ, ವಿರಾಟ್ ಅವರು ವಿಶಾಖಪಟ್ಟಣದಲ್ಲಿ 7 ಇನಿಂಗ್ಸ್‌ನಲ್ಲಿ 3 ಶತಕ ಹಾಗೂ ಪುಣೆಯಲ್ಲಿ 8 ಇನಿಂಗ್ಸ್‌ನಲ್ಲಿ 3 ಶತಕ ಬಾರಿಸಿದ್ದಾರೆ.