ಧರ್ಮಶಾಲಾ, ಡಿ.14: ಭಾನುವಾರ ಧರ್ಮಶಾಲಾದಲ್ಲಿ ನಡೆದ ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಮೂರನೇ T20I ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ವಿಶೇಷ ಮೈಲುಗಲ್ಲೊಂದನ್ನು ತಲುಪಿದರು. ಟಿ20ಯಲ್ಲಿ 100 ವಿಕೆಟ್ ಮತ್ತು1,500 ಪೂರ್ತಿಗೊಳಿಸಿದ ಮೊದಲ ಭಾರತೀಯ ಹಾಗೂ ವಿಶ್ವದ ನಾಲ್ಕನೇ ಆಟಗಾರ ಎನಿಸಿದರು. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಮಲೇಷ್ಯಾದ ವೀರಂದೀಪ್ ಸಿಂಗ್, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಮತ್ತು ಜಿಂಬಾಬ್ವೆಯ ಸಿಕಂದರ್ ರಜಾ ಈ ಸಾಧನೆ ಮಾಡಿದ ಇತರ ಆಟಗಾರರು.
ಮಹಿಳಾ ಟಿ20ಐಗಳಲ್ಲಿ ಪಾಕಿಸ್ತಾನದ ನಿದಾ ದಾರ್, ಆಸ್ಟ್ರೇಲಿಯಾದ ಎಲಿಸ್ ಪೆರ್ರಿ, ಉಗಾಂಡಾದ ಜಾನೆಟ್ ಎಂಬಾಬಾಜಿ, ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಮತ್ತು ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ ಕೂಡ 1,500 ರನ್ ಮತ್ತು 100 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
ಅರ್ಶ್‌ದೀಪ್ ಸಿಂಗ್ ಮತ್ತು ಜಸ್‌ಪ್ರೀತ್ ಬುಮ್ರಾ ನಂತರ ಪುರುಷರ ಟಿ20ಐಗಳಲ್ಲಿ 100 ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಹಾರ್ದಿಕ್ ಪಾತ್ರರಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ಓಮನ್ ವಿರುದ್ಧದ ಭಾರತದ ಏಷ್ಯಾಕಪ್ ಪಂದ್ಯದಲ್ಲಿ ವಿನಾಯಕ್ ಶುಕ್ಲಾ ಅವರನ್ನು ಔಟ್ ಮಾಡುವ ಮೂಲಕ ಅರ್ಶ್‌ದೀಪ್ ಈ ಸಾಧನೆ ಮಾಡಿದ ಮೊದಲಿಗ.
ಏತನ್ಮಧ್ಯೆ, ಬುಮ್ರಾ ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ತಮ್ಮ 100 ನೇ ಟಿ20ಐ ವಿಕೆಟ್ ಗಳಿಸಿದರು. ಕಟಕ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಡೆವಾಲ್ಡ್ ಬ್ರೆವಿಸ್ ಅವರ ವಿಕೆಟ್ ಪಡೆಯುವ ಮೂಲಕ ಈ ಮೈಲಿಗಲ್ಲು ಸಾಧಿಸಿದರು. ಮಹಿಳಾ ಟಿ20ಐಗಳಲ್ಲಿ ದೀಪ್ತಿ ಶರ್ಮಾ ಈ ಸಾಧನೆ ಮಾಡಿದ ಏಕೈಕ ಭಾರತೀಯ ಆಟಗಾರ್ತಿ. ಹಾರ್ದಿಕ್ ಅವರು ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಔಟ್ ಮಾಡುವ ಮೂಲಕ T20I ಗಳಲ್ಲಿ 100 ವಿಕೆಟ್‌ಗಳ ಗಡಿಯನ್ನು ತಲುಪಿದರು.
ಉಭಯ ಆಡುವ ಬಳಗ
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿ.ಕೀ.), ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿ.ಕೀ.), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಡೊನೊವನ್ ಫೆರೇರಾ, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್ ,ಆನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ.