ದುಬೈ, ಮಾ.31: ನ್ಯೂಜಿಲೆಂಡ್‌ನ ಆಲ್‌ರೌಂಡರ್ ಅಮೆಲಿಯಾ ಕೆರ್(Amelia Kerr) ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಮಹಿಳಾ ಟಿ20ಐ(Women's T20I rankings) ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ. ಅವರು ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ 508 ನೊಂದಿಗೆ ಮೈಲಿಗಲ್ಲು ಸಾಧಿಸಿದರು. ಈ ಹಾದಿಯಲ್ಲಿ ಅಕ್ಟೋಬರ್ 2023 ರಿಂದ ಅಗ್ರ ಸ್ಥಾನವನ್ನು ಅಲಂಕರಿಸಿದ್ದ ವೆಸ್ಟ್ ಇಂಡೀಸ್ ನಾಯಕಿ ಹೇಲಿ ಮ್ಯಾಥ್ಯೂಸ್ ಅವರನ್ನು ಹಿಂದಿಕ್ಕಿದರು.
ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕೆರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದರು. ಚಾಮರಿ ಅಥಪತ್ತು, ಮೆಗ್ ಲ್ಯಾನಿಂಗ್ ಮತ್ತು ಮ್ಯಾಥ್ಯೂಸ್ ನಂತರ ನಾಯಕಿಯಾಗಿ ಬಹು ಟಿ20ಐ ಶತಕಗಳನ್ನು ಗಳಿಸಿದ ನಾಲ್ಕನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪುರುಷರ ಟಿ20ಐಗಳಲ್ಲಿ, ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಮಾತ್ರ ಇದೇ ರೀತಿಯ ಸಾಧನೆ ಮಾಡಿದ್ದಾರೆ.
ಐಸಿಸಿ ಮಹಿಳಾ ಟಿ20ಐ ಬೌಲಿಂಗ್ ಶ್ರೇಯಾಂಕದಲ್ಲಿ ಕೆರ್ ಮೂರು ಸ್ಥಾನ ಏರಿಕೆಯಾಗಿ 10 ನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಕಿಸ್ತಾನದ ಸ್ಪಿನ್ನರ್ ಸಾದಿಯಾ ಇಕ್ಬಾಲ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ದ್ವಿತೀಯ ಸ್ಥಾನಿಯಾಗಿದ್ದಾರೆ.
ಜಾರ್ಜಿಯಾ ವೋಲ್ ನಂ.1 ಬ್ಯಾಟರ್
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಜಾರ್ಜಿಯಾ ವೋಲ್ ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ. ಎಂಟು ಸ್ಥಾನಗಳ ಜಿಗಿತದೊಂದಿಗೆ ತಮ್ಮ ತಂಡದ ಸಹ ಆಟಗಾರ್ತಿ ಬೆತ್ ಮೂನಿ ಅವರನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದ್ದಾರೆ. ಬಲಗೈ ಆಟಗಾರ್ತಿ ಇತ್ತೀಚೆಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಗಳಿಸಿದ ಮೂರನೇ ವೇಗದ ಟಿ20ಐ ಶತಕದ ದಾಖಲೆಯನ್ನು ಮಾಡಿದ್ದರು. ಕೇವಲ 52 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು. ಮತ್ತು ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20ಐನಲ್ಲಿ 53 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಪಡೆದಿದ್ದರು.
ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ ಐಪಿಎಲ್ ವೃತ್ತಿಜೀವನ ಪುನರಾರಂಭಿಸಲು ಅರ್ಜುನ್ ತೆಂಡೂಲ್ಕರ್ ಸಜ್ಜು
22 ವರ್ಷ ಮತ್ತು 230 ದಿನಗಳಲ್ಲಿ ಈ ಸಾಧನೆ ಮಾಡಿದ ವೋಲ್, ಎರಡೂ ವೈಟ್-ಬಾಲ್ ಸ್ವರೂಪಗಳಲ್ಲಿ ಶತಕ ಗಳಿಸಿದ ನಾಲ್ಕನೇ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಮೂರು ಪಂದ್ಯಗಳಿಂದ 49.33 ಸರಾಸರಿ ಮತ್ತು 172.09 ಸ್ಟ್ರೈಕ್ ರೇಟ್‌ನಲ್ಲಿ 148 ರನ್‌ಗಳೊಂದಿಗೆ ಸರಣಿಯ ಪ್ರಮುಖ ರನ್ ಸ್ಕೋರರ್ ಆದರು.
ಭಾರತೀಯರ ಪೈಕಿ, ಸ್ಮೃತಿ ಮಂಧಾನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 3 ನೇ ಸ್ಥಾನಕ್ಕೆ ಕುಸಿದರೆ, ಜೆಮಿಮಾ ರೊಡ್ರಿಗಸ್ 10 ನೇ ಸ್ಥಾನದೊಂದಿಗೆ ಅಗ್ರ 10 ರಲ್ಲಿ ಸ್ಥಾನ ಪಡೆದರು. ಬೌಲಿಂಗ್ ಪಟ್ಟಿಯಲ್ಲಿ, ರೇಣುಕಾ ಸಿಂಗ್ 5 ನೇ ಸ್ಥಾನಕ್ಕೆ ಏರಿದರು ಮತ್ತು ಅರುಂಧತಿ ರೆಡ್ಡಿ 9 ನೇ ಸ್ಥಾನಕ್ಕೆ ಏರಿದರು. ದೀಪ್ತಿ ಶರ್ಮಾ ಆಲ್‌ರೌಂಡರ್‌ಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.