ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಕ್ವಾಷ್‌ ಜಗತ್ತನ್ನೇ ಬೆರಗುಗೊಳಿಸಿದ ಭಾರತ ಯುವ ತಾರೆ ಅನಾಹತ್‌ ಸಿಂಗ್‌

Anahat Singh Scripts History: ಎರಡು ಬಾರಿ ಹಿನ್ನಡೆಯಲ್ಲಿದ್ದರೂ ಅದ್ಭುತ ಮನೋಬಲದೊಂದಿಗೆ ತಿರುಗೇಟು ನೀಡಿದ ಅನಾಹತ್, ಅಂತಿಮವಾಗಿ 4-11, 11-8, 4-11, 11-2, 11-5 ಅಂತರದಲ್ಲಿ ಜಯ ಸಾಧಿಸಿದರು. ಈ ಮೂಲಕ, ಈ ಕ್ರೀಡೆಯ ಇತಿಹಾಸದಲ್ಲಿ 'ಗೋಲ್ಡ್' ಮಟ್ಟದ ಟೂರ್ನಮೆಂಟ್‌ನ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Anahat Singh Scripts History

ಚಿಕಾಗೊ, ಅ.23: ಭಾರತದ ಉದಯೋನ್ಮುಖ ಕ್ರೀಡಾ ತಾರೆ ಅನಾಹತ್‌ ಸಿಂಗ್‌ ಅವರು ಪ್ರಸಕ್ತ ನಡೆಯುತ್ತಿರುವ ಗೋಲ್ಡ್‌-ಮಟ್ಟದ 'ಚಿಕಾಗೋ ಓಪನ್‌' ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಗುರುವಾರ ಅಗ್ರ ಶ್ರೇಯಾಂಕಿತೆ ಮತ್ತು ವಿಶ್ವದ ದಿಗ್ಗಜ ಆಟಗಾರ್ತಿ ನೌರ್‌ ಎಲ್‌ ಶೆರ್ಬಿನ್‌ ಅವರನ್ನು ನೇರ ಗೇಮ್‌ಗಳಿಂದ ಮಣಿಸಿ ಕಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಅನಾಹತ್‌, ಶುಕ್ರವಾರ ಈಜಿಪ್ಟ್‌ನ 14ನೇ ಶ್ರೇಯಾಂಕದ ಆಟಗಾರ್ತಿ ಸಲ್ಮಾ ಹಾನಿ ವಿರುದ್ಧದ ರೋಚಕ ಹಾಗೂ ಸುದೀರ್ಘ ಐದು ಗೇಮ್‌ಗಳ ಕಾದಾಟದಲ್ಲಿ ಅಸಾಧಾರಣ ಛಲವನ್ನು ಪ್ರದರ್ಶಿಸಿದರು.

ಎರಡು ಬಾರಿ ಹಿನ್ನಡೆಯಲ್ಲಿದ್ದರೂ ಅದ್ಭುತ ಮನೋಬಲದೊಂದಿಗೆ ತಿರುಗೇಟು ನೀಡಿದ ಅನಾಹತ್, ಅಂತಿಮವಾಗಿ 4-11, 11-8, 4-11, 11-2, 11-5 ಅಂತರದಲ್ಲಿ ಜಯ ಸಾಧಿಸಿದರು. ಈ ಮೂಲಕ, ಈ ಕ್ರೀಡೆಯ ಇತಿಹಾಸದಲ್ಲಿ 'ಗೋಲ್ಡ್' ಮಟ್ಟದ ಟೂರ್ನಮೆಂಟ್‌ನ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪದಕದ ಶತಕ ಬಾರಿಸಿದ ಭಾರತ

ಈ ರೋಚಕ ಮುಖಾಮುಖಿಯು, ಒತ್ತಡದ ಸನ್ನಿವೇಶದಲ್ಲಿಯೂ ಅನಾಹತ್ ತೋರಿದ ತಂತ್ರಗಾರಿಕೆಯ ಪ್ರಬುದ್ಧತೆಯನ್ನು ಎತ್ತಿ ತೋರಿಸಿತು. ಮೊದಲ ಮೂರು ಗೇಮ್‌ಗಳಲ್ಲಿ ಎರಡನ್ನು ಕಳೆದುಕೊಂಡ ನಂತರ, ಈ ಭಾರತೀಯ ಪ್ರತಿಭಾನ್ವಿತ ಆಟಗಾರ್ತಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಅಂತಿಮ ಎರಡು ಸೆಟ್‌ಗಳಲ್ಲಿ ಎದುರಾಳಿಗೆ ಒಟ್ಟು ಏಳು ಅಂಕಗಳನ್ನು ಮಾತ್ರ ಬಿಟ್ಟುಕೊಟ್ಟರು.

"ತುಂಬಾ ಸಂತೋಷವಾಗುತ್ತಿದೆ. ಈ ಪಂದ್ಯಕ್ಕೆ ಬರುವ ಮೊದಲು, ನಾನು ಸಲ್ಮಾ ವಿರುದ್ಧ ಹಿಂದೆಂದೂ ಆಡಿರಲಿಲ್ಲ, ಹಾಗಾಗಿ ಅವರಿಂದ ಏನನ್ನು ನಿರೀಕ್ಷಿಸಬಹುದು ಎಂಬುದು ನನಗೆ ತಿಳಿದಿರಲಿಲ್ಲ. ನಾನು ಅವರ ಆಟವನ್ನು ಹಲವು ಬಾರಿ ನೋಡಿದ್ದೇನೆ ಮತ್ತು ಅವರಿಗೆ 'ಪಿಎಸ್‌ಎ ವರ್ಲ್ಡ್ ಟೂರ್' (PSA World Tour) ನಲ್ಲಿ ಅಪಾರ ಅನುಭವವಿದೆ. ಅವರ ವಿರುದ್ಧ ನಾನು ಹೇಗೆ ಆಡಬಲ್ಲೆ ಎಂದು ನೋಡಲು ನಾನು ಉತ್ಸುಕಳಾಗಿದ್ದೆ. ನನ್ನ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ಮೊದಲ ಗೇಮ್ 11-4 ಅಂತರದಲ್ಲಿ ಮುಗಿಯಿತು, ಇದು ನಿಜಕ್ಕೂ ಕಳಪೆ ಆರಂಭವಾಗಿತ್ತು. ಆದರೂ, ಪಂದ್ಯಕ್ಕೆ ಮರಳಿ ಬಂದು ಹೋರಾಟ ನೀಡಲು ನಾನು ದಾರಿ ಹುಡುಕಿದೆ. ಗೆಲುವಾಗಲಿ ಅಥವಾ ಸೋಲಾಗಲಿ, ಸುಲಭವಾಗಿ ಬಿಟ್ಟುಕೊಡಲು ನಾನು ಬಯಸಲಿಲ್ಲ" ಎಂದು ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡ ನಂತರ ಅನಾಹತ್ ಹೇಳಿದರು.