ಬೆಂಗಳೂರು: ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್(Venkatesh Prasad) ಅವರು ನವೆಂಬರ್ 30 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಚುನಾವಣೆ(KSCA elections)ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದನ್ನು ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ(Anil Kumble) ಮತ್ತು ಜಾವಗಲ್ ಶ್ರೀನಾಥ್(Javagal Srinath) ಅವರು ವೆಂಕಟೇಶ್ ಪ್ರಸಾದ್‌ಗೆ ಬಲವಾದ ಬೆಂಬಲ ವ್ಯಕ್ತವಾಗಿದೆ.
ಕರ್ನಾಟಕ ಕ್ರಿಕೆಟ್ ಸಂಕಷ್ಟದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಲೋಪಗಳು ಮತ್ತು ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಐಪಿಎಲ್ ವಿಜಯೋತ್ಸವದ ಮೆರವಣಿಗೆಯಲ್ಲಿ 11 ಜೀವಗಳನ್ನು ಬಲಿ ಪಡೆದ ದುರಂತ ಕಾಲ್ತುಳಿತದಿಂದಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ತನ್ನ ಹೊಳಪನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಪ್ರಸಾದ್ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಕರ್ನಾಟಕ ಕ್ರಿಕೆಟ್ ಅನ್ನು ಮತ್ತೆ ಸಹಜ ಸ್ಥಿತಿಗೆ ತರಲು, ಪ್ರಸಾದ್ ಅವರು "ಟೀಮ್ ಗೇಮ್ ಚಾರ್ಜರ್ಸ್" ಎಂಬ ಹೆಸರಿನ ಸಮಿತಿಯನ್ನು ರಚಿಸಿದ್ದಾರೆ. ಇದರಲ್ಲಿ ಸುಜಿತ್ ಸೋಮಸುಂದರ್ (ಉಪಾಧ್ಯಕ್ಷ), ವಿನಯ್ ಮೃತ್ಯುಂಜಯ (ಕಾರ್ಯದರ್ಶಿ), ಎ.ವಿ. ಶಶಿಧರ್ (ಜಂಟಿ ಕಾರ್ಯದರ್ಶಿ) ಮತ್ತು ಬಿ.ಎನ್. ಮಧುಕರ್ (ಖಜಾಂಚಿ) ಇದ್ದಾರೆ.
"ಕರ್ನಾಟಕ ಕ್ರಿಕೆಟ್ ಸಂಕಷ್ಟದಲ್ಲಿದೆ ಮತ್ತು ಬದಲಾವಣೆ ತರಲು ವೆಂಕಿ ಇಲ್ಲಿದ್ದಾರೆ. ನಮ್ಮ ಮೂರು ವರ್ಷಗಳ ಅವಧಿಯಲ್ಲಿ (2010-2013) ನಾವು ಮಾಡಿದ ಎಲ್ಲಾ ಕೆಲಸಗಳು ಕಳೆದ ಹಲವು ವರ್ಷಗಳಿಂದ ನಡೆಯುತ್ತಿಲ್ಲ. ಕಳೆದ ವಾರ ನಾವು ಮಹಿಳಾ ವಿಶ್ವಕಪ್ ಗೆದ್ದಿದ್ದೇವೆ ಮತ್ತು ಅದು ಒಂದು ಹೆಗ್ಗುರುತು ಸಂದರ್ಭವಾಗಿತ್ತು. ಆದರೆ ನಮಗೆ [ಕರ್ನಾಟಕ] ಒಂದೇ ಒಂದು ಪ್ರಾತಿನಿಧ್ಯವಿರಲಿಲ್ಲ. ಅದು ಬದಲಾಗಬೇಕು. ಚಿನ್ನಸ್ವಾಮಿ ಕ್ರೀಡಾಂಗಣ ನಮಗೆಲ್ಲಾ ದೇವಸ್ಥಾನ ಇದ್ದ ಹಾಗೆ. ಈಗಲೂ ಅದರ ಸುತ್ತ ಮುತ್ತ ಓಡಾಡುವಾಗ ನಮಸ್ಕಾರ ಮಾಡಿಕೊಂಡು ಹೋಗುತ್ತೇವೆ. ಆದರೀಗ ಅಲ್ಲಿ ಕ್ರಿಕೆಟ್ ಸಂಪೂರ್ಣವಾಗಿ ನಿಂತು ಹೋಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಗತವೈಭವ ಮರಳಬೇಕು. ಅದಕ್ಕಾಗಿ ಪ್ರಸಾದ್‌ರ ತಂಡ ಅಧಿಕಾರಕ್ಕೆ ಬರಬೇಕು’ ಎಂದು ಕುಂಬ್ಳೆ ಹೇಳಿದರು.
ಇದನ್ನೂ ಓದಿ RCB Release And Retention List: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಹೀಗಿದೆ
ಜಾವಗಲ್ ಶ್ರೀನಾಥ್ ಕೂಡ ವೆಂಕಟೇಶ್ ಪ್ರಸಾದ್‌ಗೆ ಬೆಂಬಲ ಸೂಚಿಸಿದ್ದು, ‘2010-13ರ ವರೆಗೂ ನಾವು ಕೆಎಸ್‌ಸಿಎ ಆಡಳಿತದಲ್ಲಿ ಇದ್ದಾಗ ಬ್ರಿಜೇಶ್ ಪಟೇಲ್ ಕೈಯಲ್ಲಿ ಯಾವ ಅಧಿಕಾರವೂ ಇರಲಿಲ್ಲ. ಆ 3 ವರ್ಷಗಳಲ್ಲಿ ನಾವು 13 ಹೊಸ ಮೈದಾನಗಳನ್ನು ಮಾಡಿದ್ದೆವು. ಆ ಬಳಿಕ ಒಂದೇ ಒಂದು ಮೈದಾನ ಆಗಿಲ್ಲ. ಅಲ್ಲದೇ ಅವೆಲ್ಲವೂ ಈಗ ಹಾಳಾಗಿವೆ. ಈ ರೀತಿಯ ಆಡಳಿತ ಇರಬಾರದು. ಎಲ್ಲವೂ ಹಳೆಯ ರೀತಿಯಲ್ಲಿಯಲ್ಲಿ ಪ್ರಗತಿ ಸಾಧಿಸಬೇಕಿದ್ದರೆ ವೆಂಕಟೇಶ್ ಅಧಿಕಾರಕ್ಕೆ ಬರಬೇಕು" ಎಂದು ಹೇಳಿದರು.