ನವದೆಹಲಿ: ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಮಾಲಕಿ, ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ ನ ಕಾರ್ಯಕಾರಿ ನಿರ್ದೇಶಕಿ ಯಾಗಿರುವ ಕಾವ್ಯಮಾರನ್ (Kavya Maran) ಶೀಘ್ರವೇ ವಿವಾಹವಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸನ್ ಗ್ರೂಪ್ಸ್ನ ಮಾಲಕ ಕಲಾನಿಧಿ ಮಾರನ್ ಅವರ ಪುತ್ರಿ 32 ವರ್ಷದ ಕಾವ್ಯಾ ಅವರು 500 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿಗೆ ಒಡೆತಿಯಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಅವರು ಸೂಪರ್ ಸ್ಟಾರ್ ರಜನೀಕಾಂತ್ ಅವರ ಸೋದರಳಿಯ , ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಮದುವೆ ಆಗ್ತಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ನಟ ರವಿ ರಾಘವೇಂದ್ರ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ ಲಕ್ಷ್ಮೀ ಅವರ ಮಗ. ಅವರ ಚಿಕ್ಕಮ್ಮ ಲತಾ ಪ್ರಸಿದ್ಧ ಅವರು ನಟ ರಜನೀಕಾಂತ್ ಅವರನ್ನು ವಿವಾಹವಾದರು. ಅವರ ಮುತ್ತಜ್ಜ ಕೆ. ಸುಬ್ರ ಮಣ್ಯಂ ಅವರು 1930ರ ದಶಕದಲ್ಲಿ ಚಲನಚಿತ್ರ ನಿರ್ಮಾಪಕರಾಗಿದ್ದರು. ಇವರದ್ದು ಕಲಾ ಕುಟುಂಬವಾದ ಕಾರಣ ಅನಿರುದ್ಧ್ ಗೂ ಕೂಡ ಸಂಗೀತಾಸಕ್ತಿ ಬಾಲ್ಯದಿಂದಲೇ ಬಂದಿದೆ. ತೆಲುಗು, ಹಿಂದಿ, ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.
ವೈ ದಿಸ್ ಕೊಲವೆರಿ ಸಾಂಗ್ ಮೂಲಕವೇ ಪ್ರಸಿದ್ಧಿ ಪಡೆದ ಇವರು ಜೈಲರ್, ವಿಕ್ರಂ, ಕತ್ತಿ, ಜವಾನ್ ಇತರ ಸಿನಿಮಾಗಳಿಗೆ ಸಂಗೀತ ನೀಡಿ ಜನ ಮನ ಗೆದ್ದಿದ್ದಾರೆ. ತಮ್ಮ ಸಂಗೀತದಿಂದಲೇ ಸಿನಿಮಾಗಳನ್ನು ಹಿಟ್ ಮಾಡಿಸಿರುವ ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರು ಕಾವ್ಯಾ ಮಾರನ್ ಅವರನ್ನು ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನು ಓದಿ: 45 Movie: ‘45’ ಚಿತ್ರದ ಪ್ರಮೋಷನ್ ಹಾಡಿಗೆ ನೃತ್ಯಕ್ಕಾಗಿ ಉಗಾಂಡದಿಂದ ಆಗಮಿಸಿದ ನೃತ್ಯಗಾರರು!
ಕಾವ್ಯಾ ಮಾರನ್ ಮತ್ತು ಅನಿರುದ್ಧ್ ಸ್ನೇಹಿತರಾಗಿದ್ದು ಬಳಿಕ ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ 1 ವರ್ಷಗಳಿಗೂ ಅಧಿಕ ಕಾಲ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ಆಗೋಕೆ ಮುಂದಾಗಿದ್ದಾರೆ. ಈಗಾಗಲೇ ಎರಡು ಕುಟುಂಬಗಳಲ್ಲೂ ಈ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮದುವೆನಾ...? ಸ್ವಲ್ಪ ತಾಳ್ಮೆ ಗೆಳೆಯರೇ, ದಯವಿಟ್ಟು ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಕೈಮುಗಿಯುವ ಇಮೋಜಿಯನ್ನು ಹಾಕಿದ್ದಾರೆ. ಆದರೆ ಕಾವ್ಯ ಮಾರನ್ ಮಾತ್ರ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.