ನಗೋಯಾ, ಸೆ.26: ನಿರೀಕ್ಷೆಯಂತೆ ಭಾರತ ಮಹಿಳಾ ಕಬಡ್ಡಿ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಒಲಿಸಿಕೊಂಡಿದೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ದೇಶದ ಪದಕಗಳ ಪಟ್ಟಿಗೆ ಮತ್ತೊಂದು ಚಿನ್ನದ ಪದಕ ಸೇರ್ಪಡೆಯಾಯಿತು.
ಶನಿವಾರ ನಡೆದ ತೀವ್ರ ಪೈಪೋಟಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇರಾನ್ ವಿರುದ್ಧ 37-33 ಅಂತರದ ಜಯ ಸಾಧಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಈ ಗೆಲುವು ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಕಬಡ್ಡಿಯಲ್ಲಿ ಭಾರತಕ್ಕೆ ಲಭಿಸಿದ ನಾಲ್ಕನೇ ಚಿನ್ನದ ಪದಕವಾಗಿದೆ. ಭಾರತೀಯ ತಂಡವು ಈ ಹಿಂದೆ 2010, 2014 ಮತ್ತು 2022ರಲ್ಲಿ ಚಿನ್ನದ ಪದಕ ಗೆದ್ದಿದ್ದರೆ, 2018ರಲ್ಲಿ ರನ್ನರ್-ಅಪ್ (ದ್ವಿತೀಯ ಸ್ಥಾನ) ಆಗಿತ್ತು.
ಹಾಲಿ ಚಾಂಪಿಯನ್ ಆಗಿದ್ದ ಭಾರತ ತಂಡ ಈ ಬಾರಿ ಅಜೇಯವಾಗಿ ಫೈನಲ್‌ಗೆ ಪ್ರವೇಶಿಸಿತು. ಶುಕ್ರವಾರ ನಡೆದಿದ್ದ ನೇಪಾಳ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 48-24ರಿಂದ ಜಯ ಒಲಿಸಿಕೊಂಡಿತ್ತು. ಫೈನಲ್‌ನಲ್ಲಿಯೂ ಇದೇ ಲಯ ಮುಂದುವರಿಸಿ ಗೆಲುವು ಸಾಧಿಸಿತು.
ಕೋರ್ಟ್ನಿ ವಾಲ್ಷ್ ದಾಖಲೆ ಮೇಲೆ ಕಣ್ಣಿಟ್ಟ ರವೀಂದ್ರ ಜಡೇಜಾ; 1 ವಿಕೆಟ್ ಅಗತ್ಯ
ಕಬಡ್ಡಿ ಫೈನಲ್‌ಗೂ ಮುನ್ನ, ಪುರುಷರ ಮ್ಯಾರಥಾನ್‌ನಲ್ಲಿ ಸಾವನ್ ಬರ್ವಾಲ್ ಬೆಳ್ಳಿ ಪದಕ ಗೆದ್ದರೆ, ಮಹಿಳೆಯರ 50 ಮೀಟರ್ ರೈಫಲ್ 3-ಪೊಸಿಷನ್ ತಂಡದ ಸ್ಪರ್ಧೆಯಲ್ಲಿ ಆಶಿ ಚೌಕ್ಸೆ, ತಿಲೋತ್ತಮ ಸೇನ್ ಮತ್ತು ವಿದರ್ಶಾ ವಿನೋದ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಹಾಗೆಯೇ, ಸ್ಕ್ವಾಷ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಜೋಶ್ನಾ ಚಿನ್ನಪ್ಪ ಮತ್ತು ವೇಲವನ್ ಸೆಂಥಿಲ್‌ಕುಮಾರ್ ಕಂಚಿನ ಪದಕವನ್ನು ಗೆದ್ದುಕೊಂಡರು.
ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಮ್ಯಾರಥಾನ್ ಪದಕಕ್ಕಾಗಿ ಭಾರತದ 44 ವರ್ಷಗಳ ಕಾಯುವಿಕೆಯನ್ನು ಬರ್ವಾಲ್ 2:11:37 ಸಮಯದೊಂದಿಗೆ ಕೊನೆಗೊಳಿಸಿದರು. 1982ರ ದೆಹಲಿ ಕ್ರೀಡಾಕೂಟದ ನಂತರ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.