ಢಾಕಾ: ಇಲ್ಲಿ ನಡೆದ ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನಲ್ಲಿ(Asian Archery Championships) ಭಾರತವು ಕಾಂಪೌಂಡ್ ವಿಭಾಗದಲ್ಲಿ ತನ್ನ ಪ್ರಬಲ ಪ್ರದರ್ಶನವನ್ನು ಮುಂದುವರಿಸಿದ್ದು, ಗುರುವಾರ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದೆ. ಮಹಿಳೆಯರ ವಿಭಾಗದಲ್ಲಿ ದೀಪ್ಶಿಕಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರತೀಕಾ ಪ್ರದೀಪ್ ಅವರಿದ್ದ ಕಾಂಪೌಂಡ್ ತಂಡ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 236-234 ಅಂತರದ ಜಯ ಸಾಧಿಸಿ ಚಿನ್ನಕ್ಕೆ ಗುರಿಯಿಟ್ಟಿತು.
ಸೆಮಿಫೈನಲ್‌ನಲ್ಲಿ 234– 227 ರಿಂದ ಆತಿಥೇಯ ಬಾಂಗ್ಲಾದೇಶ ತಂಡವನ್ನು ಸೋಲಿಸಿತ್ತು. ಫೈನಲ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿತು. ಮಹಿಳೆಯರ ವೈಯಕ್ತಿಕ ಫೈನಲ್‌ನಲ್ಲಿ ಜ್ಯೋತಿ 147-145 ಅಂಕಗಳಿಂದ ಪ್ರೀತಿಕಾ ಅವರನ್ನು ಸೋಲಿಸಿದರು.
ಆದರೆ ಪುರುಷರ ಕಾಂಪೌಂಡ್ ಸ್ಪರ್ಧೆಯಲ್ಲಿ, ಅಭಿಷೇಕ್ ವರ್ಮಾ, ಸಾಹಿಲ್ ಜಾಧವ್ ಮತ್ತು ಪ್ರಥಮೇಶ್ ಫುಗೆ ಅವರ ತಂಡವು ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕಜಕಿಸ್ತಾನ್ ವಿರುದ್ಧ 229-230 ಅಂಕಗಳಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು. ಸ್ಪರ್ಧೆಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ತಂಡ, ನಿರ್ಣಾಯಕ ಕ್ಷಣದಲ್ಲಿ ಕಜಕಿಸ್ತಾನ್ ತಂಡಕ್ಕೆ ಶರಣಾಯಿತು.
ಇದನ್ನೂ ಓದಿ IPL 2026: ಕೆಕೆಆರ್ ತಂಡಕ್ಕೆ ಶೇನ್ ವ್ಯಾಟ್ಸನ್ ಸಹಾಯಕ ಕೋಚ್ ಆಗಿ ಸೇರ್ಪಡೆ
ಮಿಶ್ರ ತಂಡ ಫೈನಲ್‌ನಲ್ಲಿ ಅಭಿಷೇಕ್ ಮತ್ತು ದೀಪ್ಶಿಖಾ ಜೋಡಿ ಬಾಂಗ್ಲಾದೇಶದ ಹಿಮು ಬಚ್ಚರ್ ಮತ್ತು ಬೊನ್ನಾ ಅಕ್ತರ್ ಅವರನ್ನು 153-151 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದರು. ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಭಾರತ ಐದು ಪದಕಗಳನ್ನು ಗೆದ್ದುಕೊಂಡಿತು, ಮಹಿಳೆಯರ ವೈಯಕ್ತಿಕ ಚಿನ್ನ ಮತ್ತು ಬೆಳ್ಳಿ, ಮಹಿಳಾ ತಂಡ ಚಿನ್ನ, ಮಿಶ್ರ ತಂಡ ಚಿನ್ನ ಮತ್ತು ಪುರುಷರ ತಂಡ ಬೆಳ್ಳಿ ಪದಕ ಗಳಿಸಿತು.