ನಗೋಯಾ, ಸೆ.21: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಪ್ರಾಬಲ್ಯ ಮುಂದುವರಿದಿದೆ. ಸೋಮವಾರ ಗಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಂನಲ್ಲಿ ನಡೆದ 'ಪೂಲ್ ಬಿ' ಪಂದ್ಯದಲ್ಲಿ ಇಂಡೋನೇಷ್ಯಾವನ್ನು 17-1 ಅಂತರದಿಂದ ಹೀನಾಯವಾಗಿ ಸೋಲಿಸಿತು.
ಭಾನುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನವನ್ನು 19-0 ಅಂತರದಿಂದ ಸೋಲಿಸುವ ಮೂಲಕ ಅಭಿಯಾನ ಆರಂಭಿಸಿತ್ತು. ಬುಧವಾರ ಥೈಲ್ಯಾಂಡ್ ವಿರುದ್ಧ ಸೆಣಸಲಿದೆ.
ದೀಪಿಕಾ, ಋತುಜಾ ಪಿಸಾಲ್ ಮತ್ತು ನವನೀತ್ ಕೌರ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಸುನೇಲಿತಾ ಟೊಪ್ಪೊ, ಲಾಲ್‌ರೆಮ್ಸಿಯಾಮಿ ಮತ್ತು ಸಾಕ್ಷಿ ರಾಣಾ ತಲಾ ಎರಡು ಗೋಲುಗಳನ್ನು ಗಳಿಸಿದರು. ಇಶಿಕಾ ಮತ್ತು ನಾಯಕಿ ಸಲಿಮಾ ಟೆಟೆ ತಲಾ ಒಂದು ಗೋಲು ಗಳಿಸಿದರು.
ಮೊದಲ ಕ್ವಾರ್ಟರ್‌ನಲ್ಲಿ ಲಯ ಕಂಡುಕೊಳ್ಳಲು ಭಾರತಕ್ಕೆ ಸ್ವಲ್ಪ ಸಮಯ ಬೇಕಾಯಿತು. ತಂಡವು ಸತತವಾಗಿ ನಾಲ್ಕು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು. ಇದರಲ್ಲಿ ಎಂಟನೇ ನಿಮಿಷದಲ್ಲಿ ನಡೆದ ಕೊನೆಯ ಪ್ರಯತ್ನದಲ್ಲಿ ದೀಪಿಕಾ ತಂಡದ ಪರ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾದರು.
ನಂತರ ನಾಲ್ಕು ನಿಮಿಷಗಳ ಅಂತರದಲ್ಲಿ ಮೂರು ಗೋಲುಗಳು ದಾಖಲಾದವು ಮತ್ತು ಆ ಕ್ವಾರ್ಟರ್ ಮುಕ್ತಾಯದ ವೇಳೆಗೆ ಭಾರತ 4-0 ಅಂತರದ ಮುನ್ನಡೆ ಸಾಧಿಸಿತು. ಸಣ್ಣ ವಿರಾಮದ ನಂತರವೂ ಗೋಲು ಗಳಿಸುವ ಸರಣಿ ಮುಂದುವರಿಯಿತು ಮತ್ತು ಲಾಲ್‌ರೆಮ್ಸಿಯಾಮಿ ಎರಡನೇ ಗೋಲು ಗಳಿಸಿದರು. ಭಾರತವು 9-0 ಅಂತರದೊಂದಿಗೆ ಸುಭದ್ರ ಸ್ಥಿತಿಯಲ್ಲಿತ್ತು.
ಏಷ್ಯನ್ ಗೇಮ್ಸ್ ಶೂಟಿಂಗ್; ಹಿಮಾಂಶು ಧಿಲ್ಲೋನ್‌ಗೆ ಬೆಳ್ಳಿ, ಕಂಚು ಗೆದ್ದ ರುದ್ರಾಂಕ್ಷ್ ಪಾಟೀಲ್
ಇಂಡೋನೇಷ್ಯಾ ತಂಡವು ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಗೋಲಿನ ಖಾತೆ ತೆರೆಯಿತು. ಇನ್ನೆಸ್ ಆದಿತ್ಯ ಈ ಗೋಲು ಗಳಿಸಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಬಲವಾದ ಬ್ಯಾಕ್‌ಹ್ಯಾಂಡ್ ಶಾಟ್ ಹೊಡೆಯುವ ಮೂಲಕ ನವನೀತ್ ತಮ್ಮ ಹ್ಯಾಟ್ರಿಕ್ ಪೂರೈಸಿದರು.
ಎರಡು ಪಂದ್ಯಗಳ ನಂತರ ಆರು ಅಂಕಗಳು ಹಾಗೂ 35ರ ಉತ್ತಮ ಗೋಲು ವ್ಯತ್ಯಾಸದೊಂದಿಗೆ ಭಾರತ ತಂಡವು 'ಪೂಲ್ ಬಿ'ಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಗುಂಪಿನಲ್ಲಿ ಮುಂದಿನ ಪಂದ್ಯಗಳು ಇನ್ನಷ್ಟು ಕಠಿಣ ಪೈಪೋಟಿಗಳು ಎದುರಾಗಲಿವೆ.