ನಗೋಯಾ, ಸೆ.27: ಜೂನಿಯರ್ ವಿಶ್ವ ಚಾಂಪಿಯನ್ ಅನಾಹತ್ ಸಿಂಗ್ ಮತ್ತು ಅನುಭವಿ ಆಟಗಾರ ಅಭಯ್ ಸಿಂಗ್ ಏಷ್ಯಾಡ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಭಾನುವಾರ ನಡೆದ ಆರಂಭಿಕ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 28 ವರ್ಷದ ಅಭಯ್ ಸಿಂಗ್ ಅವರು ಮಲೇಷ್ಯಾದ ಎನ್ಜಿ ಈನ್ ಯೌ ವಿರುದ್ಧ 3-0 ಅಂತರದ ಸೋಲು ಕಂಡರೆ, ಆ ಬಳಿಕ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಅನಹತ್ ವಿಶ್ವ ನಂ. 5 ಮಲೇಷ್ಯಾದ ಸಿವಸಂಗರಿ ಸುಬ್ರಹ್ಮಣ್ಯಂ ವಿರುದ್ಧ 3-0 ನೇರ ಗೇಮ್ ಅಂತರದಿಂದ ಸೋಲನ್ನಪಿದರು.
ನಗೋಯಾ ಕಿಂಜೊ ಫುಟೊ ಅರೆನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಶಿವಸಂಗರಿ ಸುಬ್ರಮಣ್ಯಂ 18 ವರ್ಷದ ಅನಾಹತ್ ಅವರನ್ನು 11-4, 11-4, 11-7 ರಿಂದ ಸೋಲಿಸಿದರೆ, ವಿಶ್ವದ ನಂ. 17 ಎನ್ಜಿ ಈನ್ ಯೌ ಅವರು ವಿಶ್ವದ ನಂ. 26 ನೇ ಶ್ರೇಯಾಂಕದ ಅಭಯ್ ಅವರನ್ನು 11-5, 11-5, 11-5 ಅಂತರದಿಂದ ಸೋಲಿಸಿದರು.
ವಿಂಡೀಸ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ; ನಮನ್ ಧೀರ್ ಪದಾರ್ಪಣೆ
ಈ ಫಲಿತಾಂಶದಿಂದಾಗಿ, ಏಷ್ಯನ್ ಗೇಮ್ಸ್‌ನ ಸಿಂಗಲ್ಸ್ ಸ್ಪರ್ಧೆಯ ಮೂಲಕ ಲಭ್ಯವಿದ್ದ ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್‌ನ ನೇರ ಅರ್ಹತೆಯ ಅವಕಾಶವನ್ನು ಭಾರತವು ಕಳೆದುಕೊಂಡಂತಾಯಿತು. ಲಾಸ್ ಏಂಜಲೀಸ್ 2028ರಲ್ಲಿ ಸ್ಕ್ವಾಷ್ ಕ್ರೀಡೆಯು ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೇರ್ಪಡೆಯಾಗಲಿದೆ.
ಅನಾಹತ್ ಶನಿವಾರ ನಡೆದಿದ್ದ ಸೆಮಿಫೈನಲ್ನಲ್ಲಿ ತನ್ನಗಿಂತ ಉನ್ನತ ಶ್ರೇಯಾಂಕಿತ ಜಪಾನ್ನ ಸಟೊಮಿ ವತನಬೆ ವಿರುದ್ಧ ಮೊದಲ ಗೇಮ್ ಸೋಲಿನ ಹಿನ್ನಡೆ ಎದುರಿಸಿದರೂ, ಅಂತಿಮವಾಗಿ 3-2ರಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾ ಫೈನಲ್ ಪ್ರವೇಶಿಸಿದ್ದರು. 2023ರ ಏಷ್ಯಾಡ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದ 28 ವರ್ಷದ ಅಭಯ್ ಸಿಂಗ್ ಸೆಮೀಸ್ನಲ್ಲಿ ಪಾಕಿಸ್ತಾನದ ಮುಹಮ್ಮದ್ ಇರ್ಫಾನ್ ಅವರನ್ನು 3-0 ಅಂತರದಿಂದ ಹಿಮ್ಮೆಟ್ಟಿಸಿದ್ದರು.