ನಗೋಯಾ, ಅ.1: ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 124 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ ಏಷ್ಯನ್ ಗೇಮ್ಸ್ ಫೈನಲ್ ತಲುಪಿದೆ. ಚೇಸಿಂಗ್ ವೇಳೆ ಶ್ರೀಲಂಕಾ ಪರ ಕೇವಲ ಒಬ್ಬ ಬ್ಯಾಟರ್ ಮಾತ್ರ ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭಿಕ ಆಘಾತದ ಬಳಿಕ ಇಶಾನ್ ಕಿಶನ್ ಅವರ ಏಕಾಂಗಿ ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 169 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ನಾಟಕೀಯ ಕುಸಿತ ಕಂಡು 9.5 ಓವರ್‌ಗಳಲ್ಲಿ 45ರನ್‌ಗೆ ಆಲೌಟ್ ಆಯಿತು.
ಗುರಿ ಹಿಂಬಾಲಿಸಿದ ಶ್ರೀಲಂಕಾ ಖಾತೆ ತೆರೆಯುವ ಮುನ್ನವೇ ಮೂರು ವಿಕೆಟ್ ಕಳೆದುಕೊಂಡಿತು. ಆ ಬಳಿಕವೂ ತಂಡ ಸತತವಾಗಿ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತು. ನುವನಿಡು ಫೆರ್ನಾಂಡೋ ಬಾರಿಸಿದ 15 ರನ್ ಲಂಕಾ ಪರ ದಾಖಲಾದ ಅತ್ಯಧಿಕ ಮೊತ್ತ. ಒಟ್ಟು 6 ಮಂದಿ ಶೂನ್ಯ ಸುತ್ತಿದರು. ಭಾರತ ಪರ ಬಿಗು ಬೌಲಿಂಗ್ ದಾಳಿ ನಡೆಸಿದ ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಕಿತ್ತರು.
ಭಾರತದ ದಾಖಲೆಯ ರನ್ ಚೇಸ್ ಬಳಿಕ ಗುವಾಹಟಿ ಪಿಚ್ ವಿರುದ್ಧ ಗೌತಮ್ ಗಂಭೀರ್ ಕಿಡಿ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತವೂ ಆರಂಭಿಕ ಆಘಾತ ಎದುರಿಸಿತ್ತು. ಅಭಿಷೇಕ್ ಶರ್ಮಾ(7) ಮತ್ತು ಸಂಜು ಸ್ಯಾಮ್ಸನ್(7) ಬೇಗನೆ ವಿಕೆಟ್ ಕಳೆದುಕೊಂಡರು. ವೈಭವ್ ಸೂರ್ಯವಂಶಿ 38 ರನ್ ಬಾರಿಸಿದರು. ಒಂದು ಹಂತದಲ್ಲಿ 100ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಇಶಾನ್ ಕಿಶನ್ ನೆರವಾದರು.
5ನೇ ಕ್ರಮಾಂಕದಲ್ಲಿ ಆಡಲಿಳಿದ ಇಶಾನ್, ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ ಅರ್ಧಶತಕ ಬಾರಿಸಿದರು. 5 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 80 ರನ್ ಬಾರಿಸಿದರು.
ಪಾಕ್ ಎದುರಾಳಿ
ಫೈನಲ್ ಪಂದ್ಯದಲ್ಲಿ ಭಾರತ ತನ್ನ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ದಿನದ ಆರಂಭದಲ್ಲಿ ನಡೆದ ಮಳೆ ಪೀಡಿತ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಮಳೆಯಿಂದ 13 ಓವರ್‌ಗೆ ಸೀಮಿತವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 7 ವಿಕೆಟ್‌ಗೆ 111 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 11.3 ಓವರ್‌ಗಳಲ್ಲಿ 4 ವಿಕೆಟ್‌ಗೆ 112 ರನ್ ಬಾರಿಸಿ ಗೆಲುವು ದಾಖಲಿಸಿತು.