ಬೆಂಗಳೂರು, ಸೆ.23: ಕ್ರಿಕೆಟರ್ ಆಗುವ ಕನಸು ಕಂಡು, ಆಕಸ್ಮಿಕವಾಗಿ ಸಾಫ್ಟ್ ಟೆನ್ನಿಸ್ ಅಂಕಣಕ್ಕೆ ಬೌಲ್ ಬಾಯ್ ಆಗಿ ಕಾಲಿಟ್ಟ ಜಯ್ ಮೀನಾ, ಇಂದು ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಸಾಫ್ಟ್ ಟೆನ್ನಿಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಕಂಚಿನ ಪದಕ ತಂದುಕೊಟ್ಟಿದ್ದಾರೆ. ದೇವಾಸ್‌ನಿಂದ ಏಷ್ಯನ್ ಗೇಮ್ಸ್‌ನ ಪದಕ ವೇದಿಕೆಯವರೆಗಿನ ಅವರ ಪಯಣ ಇಲ್ಲಿದೆ.
ಬೌಲ್ ಬಾಯ್‌ನಿಂದ ಏಷ್ಯನ್ ಗೇಮ್ಸ್ ಪದಕದವರೆಗೆ...
ಮಧ್ಯಪ್ರದೇಶದ ದೇವಸ್‌ನ ಪುಟ್ಟ ಗ್ರಾಮದಿಂದ ಬಂದ 24 ವರ್ಷದ ಜಯ್ ಮೀನಾ, ಬಾಲ್ಯದಲ್ಲಿ ಕ್ರಿಕೆಟರ್ ಆಗಬೇಕೆಂಬ ಕನಸು ಕಂಡಿದ್ದರು. ಸಾಫ್ಟ್ ಟೆನ್ನಿಸ್ ಅವರ ಯೋಜನೆಯಲ್ಲಿ ಇರಲೇ ಇಲ್ಲ. ದೇವಾಸ್‌ನ ಪಯೋನಿಯರ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾಗ, ಅಂಕಣದಲ್ಲಿ ಆಡುತ್ತಿದ್ದ ಈ ಆಟವನ್ನು ಕುತೂಹಲದಿಂದ ನಿಂತು ನೋಡುತ್ತಿದ್ದ ಅವರು, ಕ್ರಮೇಣ ಅಲ್ಲಿ ಬೌಲ್ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿಂದ ಈ ಕ್ರೀಡೆ ಬಗ್ಗೆ ಅವರಲ್ಲಿ ಹುಟ್ಟಿದ ಸಣ್ಣ ಕುತೂಹಲ, ಆಸಕ್ತಿಯಾಗಿ ಬದಲಾಯಿತು. ಆ ಆಸಕ್ತಿಯೇ ಆಟವಾಗಿ ಬೆಳೆದು, ಕೊನೆಗೆ ಅವರ ವೃತ್ತಿಜೀವನವನ್ನೇ ರೂಪಿಸಿತು!
ಇಂದು ಆ ಅಪರೂಪದ ಕ್ರೀಡಾ ಪಯಣ ತನ್ನ ಅತ್ಯಂತ ದೊಡ್ಡ ಮೈಲಿಗಲ್ಲನ್ನು ತಲುಪಿದೆ. 2026ರ ಏಷ್ಯನ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟಮೊದಲ ಏಷ್ಯನ್ ಗೇಮ್ಸ್ ಪದಕ ತಂದುಕೊಟ್ಟ ಐತಿಹಾಸಿಕ ಸಾಧಕನಾಗಿ ಹೊರಹೊಮ್ಮಿದ್ದಾರೆ.
ಬುಧವಾರ ನಡೆದ ರೋಚಕ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಫಿಲಿಪೈನ್ಸ್‌ನ ಶೆರ್ವಿನ್ ನುಗುಯಿಟ್ ವಿರುದ್ಧದ 4-3 ಅಂತರದ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದರು. ಆದರೆ ಆ ಬಳಿಕ ನಡೆದ 45 ನಿಮಿಷಗಳ ಸೆಮಿಫೈನಲ್ ಹೋರಾಟದಲ್ಲಿ ಮೀನಾ ಅವರು ಜಪಾನ್‌ನ ಟಕುಯಾ ಕುರೋಸಾಕ ವಿರುದ್ಧ 2-4 ಅಂತರದಲ್ಲಿ ಸೋಲು ಕಂಡು ಕಂಚಿಗೆ ತೃಪ್ತಿಪಟ್ಟರು.
ಮೀನಾ ಸಾಧನೆಯ ಪಯಣ
2022ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್‌ನ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪದಕ ಜಯಿಸಿದರು. 2022ರ ಗುಜರಾತನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. ನಂತರ 2024ರ ವಿಶ್ವ ಸಾಫ್ಟ್ ಟೆನ್ನಿಸ್ ಚಾಂಪಿಯನ್‌ಷಿಪ್‌ನಲ್ಲಿ ಆಧ್ಯ ತಿವಾರಿ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟರು.
ಏಷ್ಯನ್ ಗೇಮ್ಸ್; ಸ್ಕೀಟ್ ಶೂಟಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕ
2025ರ ರಾಷ್ಟ್ರೀಯ ಚಾಂಪಿಯನ್ ಪಟ್ಟ. ಜೊತೆಗೆ ಏಷ್ಯನ್ ಸಾಪ್ಟ್ ಟನ್ನಿಸ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್, ಮಿಶ್ರ ಡಬಲ್ಸ್, ಪುರುಷರ ತಂಡ ಹಾಗೂ ಮಿಶ್ರ ತಂಡ ವಿಭಾಗಗಳಲ್ಲಿ ಒಟ್ಟು 4 ಪದಕಗಳನ್ನು ಬಾಚಿಕೊಂಡರು. 2018 (ಜಕಾರ್ತಾ) ಮತ್ತು 2022 (ಹ್ಯಾಂಗ್ಝೌ) ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಜೈ ಮೀನಾ, ತಮ್ಮ ಮೂರನೇ ಏಷ್ಯನ್ ಗೇಮ್ಸ್ ಪ್ರವೇಶದಲ್ಲಿ ಈ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಸರಕಾರದ ಬೆಂಬಲ
ಅವರ ಈ ಸಾಧನೆಯ ಹಿಂದೆ ಸತತ ಅಭ್ಯಾಸ ಹಾಗೂ ಸರ್ಕಾರದ ಬೆಂಬಲವೂ ಇದೆ. ʼಟಾರ್ಗೆಟ್ ಏಷ್ಯನ್ ಗೇಮ್ಸ್ ಗ್ರೂಪ್ʼ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಮೀನಾ, ಅಹಮದಾಬಾದ್ ಮತ್ತು ಜಮ್ಮುವಿನಲ್ಲಿ ನಡೆದ ರಾಷ್ಟ್ರೀಯ ಶಿಬಿರಗಳಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ದಕ್ಷಿಣ ಕೊರಿಯಾ ಹಾಗೂ ಜಪಾನ್‌ನಲ್ಲಿ ವಿಶೇಷ ತರಬೇತಿ ಪಡೆಯಲು ಸರ್ಕಾರದಿಂದ ನೆರವು ಲಭಿಸಿತ್ತು. 2026ರ ಏಷ್ಯನ್ ಗೇಮ್ಸ್ ಸರಣಿಗಾಗಿ ಅವರಿಗೆ TAGG ಯೋಜನೆಯಡಿ 4,06,950 ಹಾಗೂ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ನೆರವಿನಡಿ 18,79,948 ಧನಸಹಾಯ ದೊರೆತಿದೆ.