ನಗೋಯಾ, ಸೆ.23: ಏಷ್ಯನ್ ಕ್ರೀಡಾಕೂಟದ ಪುರುಷರ ಸ್ಕೀಟ್ ಶೂಟಿಂಗ್ ತಂಡದ ಸ್ಪರ್ಧೆಯಲ್ಲಿ ಅನಂತ್‌ಜೀತ್ ಸಿಂಗ್ ನರುಕಾ, ಮೈರಾಜ್ ಅಹ್ಮದ್ ಖಾನ್ ಮತ್ತು ಭವ್‌ತೇಗ್ ಸಿಂಗ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ಸ್ಕೀಟ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಪದಕ ಇದಾಗಿದ್ದು, ದೇಶದ ಶೂಟಿಂಗ್ ಅಭಿಯಾನಕ್ಕೆ ಮತ್ತೊಂದು ಪದಕದ ಸಾಧನೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಇದೇ ವಿಭಾಗದ ಮಹಿಳೆಯರ ಸ್ಫರ್ಧೆಯಲ್ಲೂ ಭಾರತ ಕಂಚಿನ ಪದಕ ಜಯಿಸಿತ್ತು.
ಪುರುಷರ ಸ್ಕೀಟ್ ತಂಡ ಕಝಾಕಿಸ್ತಾನ್ ವಿರುದ್ಧದ 'ಶೂಟ್-ಆಫ್'ನಲ್ಲಿ ಜಯಗಳಿಸುವ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಸ್ಪರ್ಧೆಯಲ್ಲಿ ಭಾರತೀಯ ತಂಡವು ಕಝಾಕಿಸ್ತಾನ್‌ನೊಂದಿಗೆ 346 ಅಂಕಗಳ ಸಮಬಲ ಸಾಧಿಸಿತ್ತು. ಆದರೆ ಶೂಟ್-ಆಫ್‌ನಲ್ಲಿ ಸಂಯಮ ಕಾಯ್ದುಕೊಂಡು ಮೂರನೇ ಸ್ಥಾನ ಪಡೆಯುವ ಮೂಲಕ ಪದಕವನ್ನು ಗೆದ್ದುಕೊಂಡಿತು.
ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ನರುಕಾ, ಪುರುಷರ ಸ್ಕೀಟ್ ವೈಯಕ್ತಿಕ ವಿಭಾಗದ ಫೈನಲ್‌ಗೆ ಪ್ರವೇಶಿಸಿದರು. ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದ ಫೈನಲ್‌ಗೆ ತಲುಪಿದರಾದರೂ, ಪದಕದ ಸುತ್ತಿನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕರ್‌ಗೆ ನಿರಾಸೆ
ಐತಿಹಾಸಿಕ ಕಂಚು ಗೆದ್ದ ಜಯ್ ಮೀನಾ
ಪುರುಷರ ಸಿಂಗಲ್ಸ್ ಸಾಫ್ಟ್ ಟೆನ್ನಿಸ್ ವಿಭಾಗದಲ್ಲಿ ಜಯ್ ಮೀನಾ ಅವರು ಫೈನಲ್ ಪ್ರವೇಶಿಸಲು ವಿಫಲರಾದರೂ ಕಂಚಿಕ ಪದಕ ಗೆದ್ದು ಸಾಫ್ಟ್ ಟೆನ್ನಿಸ್‌ನಲ್ಲಿ ಭಾರತಕ್ಕೆ ಮೊದಲ ಏಷ್ಯನ್ ಗೇಮ್ಸ್ ಪದಕವನ್ನು ಗೆದ್ದುಕೊಟ್ಟರು. 45 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೀನಾ ಅವರು ಜಪಾನ್‌ನ ಟಕುಯಾ ಕುರೋಸಾಕ ವಿರುದ್ಧ 2-4 ಅಂತರದಲ್ಲಿ ಸೋಲನ್ನಪ್ಪಿದರು. ಜಪಾನಿನ ಆಟಗಾರ ಆರಂಭಿಕ ಮೂರು ಗೇಮ್‌ಗಳನ್ನು ಗೆದ್ದು ಮುನ್ನಡೆ ಸಾಧಿಸಿದ್ದರು.
ಆದರೆ, ಮೀನಾ ಸುಲಭವಾಗಿ ಶರಣಾಗಲಿಲ್ಲ. 0-3 ಅಂತರದಲ್ಲಿ ಹಿನ್ನಡೆ ಅನುಭವಿಸಿದ ನಂತರವೂ ಭಾರತೀಯ ಆಟಗಾರ ದಿಟ್ಟ ಹೋರಾಟ ನಡೆಸಿ ಪಂದ್ಯಕ್ಕೆ ಮರಳಿದರು. ನಾಲ್ಕನೇ ಗೇಮ್ ಅನ್ನು 4-1 ಅಂತರದಲ್ಲಿ ಮತ್ತು ಐದನೇ ಗೇಮ್ ಅನ್ನು 6-4 ಅಂತರದಲ್ಲಿ ಗೆಲ್ಲುವ ಮೂಲಕ ಅಂತರವನ್ನು 2-3ಕ್ಕೆ ತಗ್ಗಿಸಿದರು. ಆರನೇ ಗೇಮ್‌ನಲ್ಲಿ ಕುರೋಸಾಕ ಸಂಯಮ ಕಾಯ್ದುಕೊಂಡು 4-1 ಅಂತರದಲ್ಲಿ ಜಯಗಳಿಸುವ ಮೂಲಕ ಪಂದ್ಯವನ್ನು ತಮ್ಮದಾಗಿಸಿಕೊಂಡರು.