ನಗೋಯಾ, ಸೆ.26: ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ಶೂಟಿಂಗ್ ವಿಭಾಗದಲ್ಲಿ ಮತ್ತೊಂದು ಪದಕವನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದು, ಮಹಿಳೆಯರ 50 ಮೀಟರ್ ರೈಫಲ್ 3-ಪೊಸಿಷನ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ.
ಶನಿವಾರ ನಡೆದ ಸ್ಪರ್ಧೆಯಲ್ಲಿ ತಿಲೋತ್ತಮಾ ಸೇನ್ (590), ವಿದರ್ಶಾ ಕೆ. ವಿನೋದ್ (588) ಮತ್ತು ಆಶಿ ಚೌಕ್ಸೆ (585) ಅವರನ್ನೊಳಗೊಂಡ ತಂಡವು ಒಟ್ಟು 1,763 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯಿತು. ಚೀನಾ ತಂಡವು 1,773 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿತು ಮತ್ತು ಹ್ಯಾಂಗ್‌ಝೌ 2023ರ ತನ್ನದೇ ಆದ ಗೇಮ್ಸ್ ದಾಖಲೆಯನ್ನು ಸರಿಗಟ್ಟಿತು.
ವೈಯಕ್ತಿಕ ವಿಭಾಗದ ಫೈನಲ್‌ಗೆ ತಿಲೋತ್ತಮಾ ಮತ್ತು ವಿದರ್ಶಾ ಫೈನಲ್‌ಗೆ ಅರ್ಹತೆ ಪಡೆದರು. ಅವರು ಕ್ರಮವಾಗಿ ಮೂರನೇ ಮತ್ತು ಆರನೇ ಸ್ಥಾನಗಳನ್ನು ಗಳಿಸಿದರು. ತಿಲೋತ್ತಮಾ 'ಸ್ಟ್ಯಾಂಡಿಂಗ್' (ನಿಂತು ಗುರಿ ಇಡುವ) ಸರಣಿಯಲ್ಲಿ 97 ಮತ್ತು 98 ಅಂಕಗಳನ್ನು ಗಳಿಸಿದರೆ, ವಿದರ್ಶಾ 'ನೀಲಿಂಗ್' (ಮೊಣಕಾಲೂರಿ ಗುರಿ ಇಡುವ) ಹಂತದಲ್ಲಿ 193 ಅಂಕಗಳ ನಂತರ ಚೇತರಿಸಿಕೊಂಡು 98 ಮತ್ತು 98 ಅಂಕಗಳನ್ನು ದಾಖಲಿಸಿದರು.
ಆಶಿ 585 ಅಂಕಗಳೊಂದಿಗೆ 15ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅವರ ಆರಂಭಿಕ 'ಸ್ಟ್ಯಾಂಡಿಂಗ್' ಸರಣಿಯಲ್ಲಿ ಗಳಿಸಿದ 93 ಅಂಕಗಳು ಅವರಿಗೆ ಹಿನ್ನಡೆಯುಂಟುಮಾಡಿದವು. ಅಂತಿಮ ಸರಣಿಯಲ್ಲಿ 97 ಅಂಕಗಳನ್ನು ಗಳಿಸಿದರೂ, ವೈಯಕ್ತಿಕ ಫೈನಲ್‌ಗೆ ಪ್ರವೇಶಿಸಲು ಅವರಿಗೆ ಸಾಧ್ಯವಾಗಲಿಲ್ಲ.
Asian Games 2026: 10,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಗುಲ್ವೀರ್ ಸಿಂಗ್!
ಬೆಳ್ಳಿ ಗೆದ್ದ ಸಾವನ್ ಬರ್ವಾಲ್
ಪುರುಷರ ಮ್ಯಾರಥಾನ್‌ನಲ್ಲಿ ಭಾರತದ ಸಾವನ್ ಬರ್ವಾಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಬರ್ವಾಲ್ ಅವರು 2 ಗಂಟೆ 11 ನಿಮಿಷ 37 ಸೆಕೆಂಡುಗಳ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಜಪಾನ್‌ನ ಇಚಿತಕ ಯಮಶಿತಾ (2:10:49) ಅವರ ನಂತರ ಎರಡನೇ ಸ್ಥಾನವನ್ನು ಪಡೆದರು. ಈ ಮೂಲಕ, ಛೋಟಾ ಸಿಂಗ್ (ಚಿನ್ನ, 1951 ನವದೆಹಲಿ), ಸೂರತ್ ಮಾಥುರ್ (ಕಂಚು, 1951 ನವದೆಹಲಿ) ಮತ್ತು ಎಚ್.ಕೆ. ಸೀತಾರಾಮ್ (ಕಂಚು, 1982 ನವದೆಹಲಿ) ಅವರ ನಂತರ ಈ ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಪದಕ ಗೆದ್ದ ಇತಿಹಾಸದ ನಾಲ್ಕನೇ ಭಾರತೀಯ ಪುರುಷ ಕ್ರೀಡಾಪಟು ಎನಿಸಿಕೊಂಡರು.
ಬರ್ವಾಲ್ ಈ ವರ್ಷದ ಏಪ್ರಿಲ್‌ನಲ್ಲಿ ತಾವೇ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು 21 ಸೆಕೆಂಡುಗಳಷ್ಟು ಉತ್ತಮಪಡಿಸಿದರು. ಒಟ್ಟು 19 ಸ್ಪರ್ಧಿಗಳಿದ್ದ ಈ ವಿಭಾಗದಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಭಾರತೀಯರಾದ ಕಾರ್ತಿಕ್ ಕರ್ಕೇರಾ (2:22:41) 17ನೇ ಸ್ಥಾನ ಪಡೆದರು.