ನಗೋಯಾ, ಸೆ.20: ಜಪಾನ್‌ನ ನಿಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 114 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ, ಹಾಲಿ ಚಾಂಪಿಯನ್ ಭಾರತೀಯ ಮಹಿಳಾ ತಂಡವು ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರ ಚಿನ್ನದ ಪದಕದ ಪಂದ್ಯಕ್ಕೆ ಲಗ್ಗೆ ಇಟ್ಟಿತು. ಈ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ಶಫಾಲಿ ವರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದರು.
22 ವರ್ಷದ ಆರಂಭಿಕ ಆಟಗಾರ್ತಿ ಕೇವಲ 49 ಎಸೆತಗಳಲ್ಲಿ ಅಜೇಯ 100 ರನ್ ಸಿಡಿಸುವ ಮೂಲಕ, ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಆಟಗಾರ್ತಿಯಾದರು. ಅವರ ಬ್ಯಾಟಿಂಗ್ ಇನ್ನಿಂಗ್ಸ್‌ಬಲ್ಲಿ ಮೂರು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಒಳಗೊಂಡಿತ್ತು.
ಸ್ಮೃತಿ ಮಂಧನಾ ಮತ್ತು ಹರ್ಮನ್‌ಪ್ರೀತ್ ಕೌರ್ ನಂತರ, ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯ ಆಟಗಾರ್ತಿಯೊಬ್ಬರು ಗಳಿಸಿದ ಮೂರನೇ ಶತಕ ಇದಾಗಿದೆ. 49 ಎಸೆತಗಳಲ್ಲಿ ಶತಕ ಪೂರೈಸಿದ ಶಫಾಲಿ, 2018ರಲ್ಲಿ ನ್ಯೂಜಿಲೆಂಡ್ ವಿರುದ್ಧ ಹರ್ಮನ್‌ಪ್ರೀತ್ ನಿರ್ಮಿಸಿದ್ದ ಅತಿ ವೇಗದ ಟಿ20 ಅಂತಾರಾಷ್ಟ್ರೀಯ ಶತಕದ ದಾಖಲೆಯನ್ನೂ ಸರಿಗಟ್ಟಿದರು.
ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್; ಬಾಂಗ್ಲಾದೇಶ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ
ಒಂಬತ್ತು ಸಿಕ್ಸರ್‌ಗಳೊಂದಿಗೆ ಮಹಿಳಾ T20I ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಸರಿಗಟ್ಟಿದವು. ವೆಸ್ಟ್ ಇಂಡೀಸ್ ತಾರೆಗಳಾದ ಡಿಯಾಂಡ್ರಾ ಡಾಟಿನ್ ಮತ್ತು ಹೇಲಿ ಮ್ಯಾಥ್ಯೂಸ್ ಕೂಡ 9 ಸಿಕ್ಸರ್ ಸಿಡಿಸಿದ್ದಾರೆ.
ಶಫಾಲಿ ಇದೀಗ 2026ರಲ್ಲಿ 800 ಟಿ20 ಅಂತರರಾಷ್ಟ್ರೀಯ (T20I) ರನ್‌ಗಳ ಗಡಿಯನ್ನು ದಾಟಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ, ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಂತ ಆಕ್ರಮಣಕಾರಿ ಆರಂಭಿಕ ಆಟಗಾರ್ತಿಯರಲ್ಲಿ ಒಬ್ಬರಾಗಿ ಶಫಾಲಿ ಗುರುತಿಸಿಕೊಂಡಿದ್ದಾರೆ. ಸ್ಪಿನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಹಿಡಿತ ಸಾಧಿಸಿದ್ದಾರೆ.
100 ಸಿಕ್ಸರ್‌ಗಳೊಂದಿಗೆ ಭಾರತೀಯ ಆಟಗಾರ್ತಿಯರ ಪೈಕಿ ಎರಡನೇ ಸ್ಥಾನದಲ್ಲಿರುವ ಮಂಧನಾ, ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಮತ್ತು ಅತ್ಯಂತ ಜನಪ್ರಿಯ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ.
104 ಸಿಕ್ಸರ್‌ಗಳೊಂದಿಗೆ, ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿನ ಬ್ಯಾಟರ್‌ಗಳ ಪಟ್ಟಿಯಲ್ಲಿ ವರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಚಾಮರಿ ಅಟಪಟ್ಟು120 ಸಿಕ್ಸರ್‌ಗಳನ್ನು ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಪಟ್ಟಿಯಲ್ಲಿ ಶಫಾಲಿ(36) ಅಗ್ರಸ್ಥಾನಿಯಾಗಿದ್ದಾರೆ. ಚಾಮರಿ ಅಟಪಟ್ಟು(32) ಎರಡನೇ ಸ್ಥಾನದಲ್ಲಿದ್ದಾರೆ.