ನಗೋಯಾ, ಅ.24: 'ಐಚಿ-ನಾಗೋಯಾ 2026 ಏಷ್ಯನ್ ಪ್ಯಾರಾ ಗೇಮ್ಸ್'ಗೆ ಶನಿವಾರ ಅದ್ಧೂರಿ ಸಮಾರೋಪ ಸಮಾರಂಭದ ಮೂಲಕ ತೆರೆಬಿದ್ದಿತು. ಜಪಾನ್‌ನಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಈ ಕ್ರೀಡಾಕೂಟವು, 45 ದೇಶಗಳು ಮತ್ತು ಪ್ರದೇಶಗಳಿಂದ ಸುಮಾರು 4,000 ಕ್ರೀಡಾಪಟುಗಳು ಹಾಗೂ ಸಿಬ್ಬಂದಿಯನ್ನು ಒಗ್ಗೂಡಿಸಿತು.
ಏಷ್ಯನ್ ಪ್ಯಾರಾ ಗೇಮ್ಸ್‌ನ ಮೊದಲ ಆವೃತ್ತಿಯು 2010ರಲ್ಲಿ ಚೀನಾದ ಗುವಾಂಗ್‌ಝೌನಲ್ಲಿ ನಡೆಯಿತು. ಐಚಿ-ನಗೋಯಾದಲ್ಲಿ ನಡೆದ ಕ್ರೀಡಾಕೂಟವು ಐದನೇ ಆವೃತ್ತಿಯಾಗಿದ್ದು, 2030ರಲ್ಲಿ ದೋಹಾದಲ್ಲಿ ಆರನೇ ಆವೃತ್ತಿಯು ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ, ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದ ಮೋನಾ ಅಗರ್ವಾಲ್ (ಶೂಟಿಂಗ್) ಮತ್ತು ನಿಶಾದ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್) ಅವರು ಭಾರತದ ಧ್ವಜಧಾರಿಗಳಾಗಿದ್ದರು. ಒಂಬತ್ತನೇ ವಯಸ್ಸಿನಲ್ಲಿ ಪೋಲಿಯೊಗೆ ತುತ್ತಾಗಿ, ಎರಡೂ ಕಾಲುಗಳು ಬಾಧಿತಗೊಂಡು, ಚಕ್ರಕುರ್ಚಿಯನ್ನು ಅವಲಂಬಿಸುವಂತಾದ 38 ವರ್ಷದ ಮೋನಾ, ಈ ಕ್ರೀಡಾಕೂಟದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸಿದರು.
ಭಾರತದ ಐತಿಹಾಸಿಕ ಸಾಧನೆ
ಭಾರತ ದಾಖಲೆಯ ಪದಕ ಗಳಿಕೆಯೊಂದಿಗೆ ಕ್ರೀಡಾಕೂಟವನ್ನು ಸ್ಮರಣೀಯವಾಗಿ ಮುಕ್ತಾಯಗೊಳಿಸಿತು. 30 ಚಿನ್ನ, 35 ಬೆಳ್ಳಿ, 49 ಕಂಚು ಸೇರಿ ಒಟ್ಟು 114 ಪದಕ ಬಾಚಿಕೊಂಡಿತು. 2023ರಲ್ಲಿ ಚೀನಾದ ಹಾಂಗ್ಝೂನಲ್ಲಿ ನಡೆದಿದ್ದ 4ನೇ ಆವೃತ್ತಿಯ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ 108 ಪದಕ ಜಯಿಸಿತ್ತು.
ಪಾಕಿಸ್ತಾನದ ನಂತರ ಈ ಸಾಧನೆಗೈದ ವಿಶ್ವದ 2ನೇ ತಂಡವಾಗಿ ಹೊರಹೊಮ್ಮಿದ ಭಾರತ
2023ರಲ್ಲಿ ಭಾರತ ಬರೋಬ್ಬರಿ 309 ಕ್ರೀಡಾಪಟುಗಳನ್ನು ಕಳುಹಿಸಿತ್ತು. ಆದರೆ ಈ ಸಲ 168 ಸ್ಪರ್ಧಿಗಳಷ್ಟೇ ತೆರೆಳಿದ್ದರು. 141 ಮಂದಿ ಕಡಿಮೆ ಸ್ಪರ್ಧಿಗಳಿದ್ದರೂ, ಭಾರತ ಪದಕ ಗಳಿಕೆಯಲ್ಲಿ ದಾಖಲೆ ಬರೆಯಿತು. ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಪಡೆಯಿತು. ಈ ಕೂಟದಲ್ಲಿ ಭಾರತದ 4 ಕ್ರೀಡಾಪಟುಗಳು ತಲಾ 3 ಪದಕ ಗೆದ್ದರು. ಆರ್ಚರಿಯಲ್ಲಿ ಶೀತಲ್ ದೇವಿಗೆ 2 ಚಿನ್ನ, 1 ಬೆಳ್ಳಿ, ಬ್ಯಾಡ್ಮಿಂಟನ್‌ನಲ್ಲಿ ತುಳಸಿಮತಿಗೆ 1 ಚಿನ್ನ, 2 ಬೆಳ್ಳಿ, ಈಜಿನಲ್ಲಿ ರವಿ ಬುದಿಗಿನಾಗೆ 2 ಬೆಳ್ಳಿ, 1 ಕಂಚು, ಈಜಿನಲ್ಲಿ ಹಿಮಾನ್ಶು ನಂದಲ್‌ಗೆ 3 ಕಂಚು ದೊರೆಯಿತು.