ನಾಗೋಯಾ, ಅ.23: ಶುಕ್ರವಾರ ಇಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ, ಭಾರತದ ಸಂದೀಪ್ ಮತ್ತು ಹ್ಯಾನಿ ಅವರು ಕ್ರಮವಾಗಿ ಪುರುಷರ 400 ಮೀಟರ್ ಟಿ64 (T64) ಓಟ ಮತ್ತು ಪುರುಷರ ಜಾವೆಲಿನ್ ಎಸೆತ ಎಫ್37/38 (F37/38) ವಿಭಾಗಗಳಲ್ಲಿ ವಿಶ್ವ ದಾಖಲೆಯ ಪ್ರದರ್ಶನದೊಂದಿಗೆ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
ನಗೋಯಾ ಸಿಟಿ ಮಿಜುಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ 400 ಮೀ ಟಿ64 ಫೈನಲ್ನಲ್ಲಿ ಸಂದೀಪ್ 52.28 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದರು. ಅವರು ಸೌದಿ ಅರೇಬಿಯಾದ ನೂರ್ ಅಲ್ಸಾನಾ (53.13, ಋತುವಿನ ಅತ್ಯುತ್ತಮ) ಗಿಂತ 0.85 ಸೆಕೆಂಡುಗಳಲ್ಲಿ ಮುಂದೆ ತಲುಪಿದರು. ಸಂದೀಪ್ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ 100ನೇ ಪದಕದ ಗಡಿ ತಲುಪಿತು.
ಏಷ್ಯನ್ ಪ್ಯಾರಾ ಗೇಮ್ಸ್; ವಿಶ್ವ ದಾಖಲೆಯೊಂದಿಗೆ 2ನೇ ಚಿನ್ನ ಗೆದ್ದ ಮೋನಾ ಅಗರ್ವಾಲ್
ಭಾರತದ ಅಜಯ್ ಕುಮಾರ್ 53.61 ಸೆಕೆಂಡುಗಳಲ್ಲಿ ಕಂಚಿನ ಪದಕ ಗೆದ್ದರು, ಇದು ಗೇಮ್ಸ್ ದಾಖಲೆಯಾಗಿದೆ. ಚೀನಾದ ಹುವಾಂಗ್ ರುಯಿಹುವಾ 54.39 ಸೆಕೆಂಡುಗಳ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದರು.
ಅವಳಿ ಪದಕ ಗೆದ್ದ ಹ್ಯಾನಿ
ಪುರುಷರ ಜಾವೆಲಿನ್ ಥ್ರೋ ಎಫ್ 37/38 ರಲ್ಲಿ ಹ್ಯಾನಿ ತನ್ನ ಅಂತಿಮ ಪ್ರಯತ್ನದಲ್ಲಿ ಎಫ್ 37 ವಿಭಾಗದಲ್ಲಿ 60.49 ಮೀ ವಿಶ್ವ ದಾಖಲೆಯ ಪ್ರಯತ್ನದೊಂದಿಗೆ ಚಿನ್ನವನ್ನು ಪಡೆದರು. ಈ ಹಿಂದೆ ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ನಂತರ ಅವರು ತಮ್ಮ ಏಷ್ಯನ್ ಪ್ಯಾರಾ ಗೇಮ್ಸ್ ಪಟ್ಟಿಯಲ್ಲಿ ಎರಡನೇ ಪದಕವನ್ನು ಸೇರಿಸಿದರು.
ಮಿಶ್ರ ಡಬಲ್ಸ್ (SL3-SU5) ಬಾಡ್ಮಿಂಟನ್ ವಿಭಾಗದ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ, ತುಳಸಿಮತಿ ಮುರುಗೇಶನ್ ಮತ್ತು ನಿತೇಶ್ ಕುಮಾರ್ ಜೋಡಿಯು ಇಂಡೋನೇಷ್ಯಾದ ಲಿಯಾನಿ ಒಕ್ಟಿಲಾ ಮತ್ತು ಹಿಕಮತ್ ರಾಮ್ದಾನಿ ವಿರುದ್ಧ 1-2 ಅಂತರದಲ್ಲಿ ಸೋತು, ಬೆಳ್ಳಿ ಪದಕವನ್ನು ಗೆದ್ದುಕೊಂಡಿತು.
ಭಾರತೀಯ ಜೋಡಿಯು ಮೊದಲ ಗೇಮ್ 11-21 ಅಂತರದಲ್ಲಿ ಕಳೆದುಕೊಂಡರೂ, ಎರಡನೇ ಗೇಮ್ನಲ್ಲಿ 21-19 ಅಂತರದ ಜಯದೊಂದಿಗೆ ತಿರುಗೇಟು ನೀಡಿತು. ಆದರೆ, ನಿರ್ಣಾಯಕ ಮೂರನೇ ಗೇಮ್ನಲ್ಲಿ ಅವರು 14-21 ಅಂತರದಲ್ಲಿ ಸೋಲನ್ನಪ್ಪಿದರು.
ಬೆಳ್ಳಿ ಗೆದ್ದ ನಿತ್ಯಾ
ಪ್ಯಾರಾ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ SH6 ವಿಭಾಗದ ಫೈನಲ್ನಲ್ಲಿ, ಚೀನಾದ ಫೆಂಗ್ಮೇ ಲಿ ವಿರುದ್ಧ 12-21, 13-21 ಅಂತರದಲ್ಲಿ ಸೋಲನುಭವಿಸಿದ ನಿತ್ಯಾ ಶ್ರೀ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಫೆಂಗ್ಮೇ ಲಿ ಅವರು 26 ನಿಮಿಷಗಳಲ್ಲಿ ನೇರ ಗೇಮ್ಗಳ ಜಯದೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.