ನಗೋಯಾ, ಅ.22: ಕಾಂಪೌಂಡ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಇಂಡೋನೇಷ್ಯಾವನ್ನು 151-148 ಅಂತರದಿಂದ ಸೋಲಿಸುವ ಮೂಲಕ, ಭಾರತದ ಶೀತಲ್ ದೇವಿ ಮತ್ತು ತೋಮನ್ ಕುಮಾರ್ ಜೋಡಿ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದೇಶಕ್ಕೆ ಮೊದಲ ಬಿಲ್ಲುಗಾರಿಕೆ ಚಿನ್ನದ ಪದಕವನ್ನು ತಂದುಕೊಟ್ಟರು.
ಅಗ್ರ ಶ್ರೇಯಾಂಕಿತ ಭಾರತೀಯ ತಂಡವು ಪಂದ್ಯದ ಬಹುಪಾಲು ಅವಧಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತು ಮತ್ತು ಅಂತಿಮವಾಗಿ ಮೂರು ಅಂಕಗಳ ಅಂತರದಿಂದ ಜಯ ಸಾಧಿಸಿತು. ಮೊದಲ ಸುತ್ತಿನಲ್ಲಿ 38-37 ಅಂತರದ ಅಲ್ಪ ಮುನ್ನಡೆ ಸಾಧಿಸಿದರು. ನಂತರ ಎರಡನೇ ಸುತ್ತಿನಲ್ಲಿ 39 ಅಂಕಗಳನ್ನು ಗಳಿಸುವ ಮೂಲಕ ತಮ್ಮ ಮುನ್ನಡೆಯನ್ನು 77-73 ಕ್ಕೆ ವಿಸ್ತರಿಸಿದರು.
ಮೂರನೇ ಹಂತದಲ್ಲಿ 36 ಅಂಕಗಳನ್ನು ಗಳಿಸಿದರೂ, ಭಾರತೀಯ ಜೋಡಿಯು ಅಂತಿಮ ಹಂತದಲ್ಲಿ 38 ಅಂಕಗಳನ್ನು ಪಡೆಯುವ ಮೂಲಕ ಚೇತರಿಸಿಕೊಂಡು ಚಿನ್ನದ ಪದಕವನ್ನು ಖಚಿತಪಡಿಸಿಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಮೀತ್ ಮಿಶ್ರಾ ನೂತನ ಸ್ಪಿನ್ ಕೋಚ್
ವಿಶ್ವ ದಾಖಲೆ ಮುರಿದ ಭಾರತೀಯ ಜೋಡಿ
ಶೀತಲ್ ಮತ್ತು ತೋಮನ್ ಕುಮಾರ್ ಚಿನ್ನದ ಪದಕ ಗೆಲ್ಲುವ ಜತೆಗೆ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದರು. ಅರ್ಹತಾ ಸುತ್ತಿನಲ್ಲಿ 1,402 ಅಂಕಗಳನ್ನು ಗಳಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು.
ಇದಕ್ಕೂ ಮುನ್ನ ನಡೆದ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ (XD7) ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಪಾನ್‌ನ ಕಿಮಿ ಬೆಶೊ ಮತ್ತು ಮಸನೋರಿ ಉನೊ ಅವರನ್ನು 11-9, 11-3, 11-6 ಅಂತರದಿಂದ ಸೋಲಿಸುವ ಮೂಲಕ, ಭಾರತದ ಭಾವಿನಾ ಪಟೇಲ್ ಮತ್ತು ಶುಭಂ ವಾಧ್ವಾ ಅವರು ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಅವರು ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಅಲ್ಲಿ ಅವರು ದಕ್ಷಿಣ ಕೊರಿಯಾದ ಜೋಡಿಯನ್ನು ಎದುರಿಸಲಿದ್ದಾರೆ.
ಇದೇ ವೇಳೆ, XD17 ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದತ್ತಪ್ರಸಾದ್ ಚೌಗುಲೆ ಮತ್ತು ಸವಿತಾ ಜೋಡಿಯು ಫಿಲಿಪ್ಪೀನ್ಸ್ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿತು. ಅವರು ಮೊದಲ ಎರಡು ಗೇಮ್‌ಗಳನ್ನು 11-9, 11-9 ಅಂತರದಲ್ಲಿ ಗೆದ್ದುಕೊಂಡಿದ್ದರೂ, ನಂತರದ ಮೂರು ಗೇಮ್‌ಗಳನ್ನು 2-11, 6-11, 5-11 ಅಂತರದಲ್ಲಿ ಕಳೆದುಕೊಂಡರು.