ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಸೀಸ್‌ ಗರ್ವಭಂಗ; ಜಿಂಬಾಬ್ವೆಗೆ ಭರ್ಜರಿ ಗೆಲುವು

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಜಿಂಬಾಬ್ವೆ 2 ವಿಕೆಟ್‌ಗೆ 169 ರನ್‌ ಬಾರಿಸಿತು. ಜವಾಬಿತ್ತ ಆಸ್ಟ್ರೇಲಿಯಾ ತಂಡ ವೇಗಿ ಮುಜರಬಾನಿ ದಾಳಿಗೆ ನಲುಗಿ 19.3 ಓವರ್‌ಗಳಲ್ಲಿ 146 ರನ್‌ಗೆ ಸರ್ವಪತನ ಕಂಡಿತು. 17 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತ ಮುಜರಬಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Blessing Muzarabani

ಕೊಲಂಬೊ, ಫೆ. 13: ಐಸಿಸಿ ಟೂರ್ನಿಗಳಲ್ಲಿ ಯಾವತ್ತೂ ಕಿಂಗ್‌ ಎನಿಸಿಕೊಳ್ಳುತ್ತಿದ್ದ ಆಸ್ಟ್ರೇಲಿಯಾಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ(AUS vs ZIM) ತಂಡ ಆಘಾತಕಾರಿ ಸೋಲಿನ ಏಟು ನೀಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 23 ರನ್‌ ಅಂತರದ ಅಮೋಘ ಗೆಲುವು ಸಾಧಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಆಸೀಸ್‌ಗೆ ಎದುರಾದ ಎರಡನೇ ಸೋಲು. ಇದಕ್ಕೂ ಮುನ್ನ 2007ರ ಉದ್ಘಾಟನ ಆವೃತ್ತಿಯಲ್ಲಿ 5 ವಿಕೆಟ್‌ ಸೋಲು ಕಂಡಿತ್ತು. ಒಟ್ಟಾರೆ ಐಸಿಸಿ ಟೂರ್ನಿಯಲ್ಲಿ ಮೂರನೇ ಸೋಲು. ಮೊದಲ ಸೋಲು 1983 ಏಕದಿನ ವಿಶ್ವಕಪ್‌ನಲ್ಲಿ ಎದುರಾಗಿತ್ತು. ಅಲ್ಲಿ 13 ರನ್‌ ಸೋಲು ಕಂಡಿತ್ತು.

ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಜಿಂಬಾಬ್ವೆ 2 ವಿಕೆಟ್‌ಗೆ 169 ರನ್‌ ಬಾರಿಸಿತು. ಜವಾಬಿತ್ತ ಆಸ್ಟ್ರೇಲಿಯಾ ತಂಡ ವೇಗಿ ಬ್ಲೆಸಿಂಗ್ ಮುಜರಬಾನಿ ದಾಳಿಗೆ ನಲುಗಿ 19.3 ಓವರ್‌ಗಳಲ್ಲಿ 146 ರನ್‌ಗೆ ಸರ್ವಪತನ ಕಂಡಿತು. 17 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತ ಮುಜರಬಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಚೇಸಿಂಗ್‌ ವೇಳೆ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ಎದುರಿಸಿತು. ಯುವ ವೇಗಿ ಮುಜರಬಾನಿಯ ಘಾತಕ ಬೌಲಿಂಗ್‌ ದಾಳಿಗೆ ತಡೆಯೊಡ್ಡಲು ವಿಫಲರಾಗಿ 29 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಜೋಶ್ ಇಂಗ್ಲಿಶ್ 8 ರನ್ ಗಳಿಸಿದರೆ, ಕ್ಯಾಮರೋನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು. ಹಂಗಾಮಿ ನಾಯಕ ಟ್ರಾವಿಸ್‌ ಹೆಡ್ 17 ರನ್‌ಗಳಿಸಿ ನಿರಾಸೆ ಮೂಡಿಸಿದರು.



ಮುಜರಬಾನಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ ಬ್ರಾಡ್ ಇವಾನ್ಸ್ 23 ರನ್‌ಗೆ ಮೂರು ವಿಕೆಟ್‌ ಕಿತ್ತರು. ಮುಜರಬಾನಿ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್‌ ಬಿಟ್ಟುಕೊಟ್ಟು 4 ಪ್ರಮುಖ ವಿಕೆಟ್‌ ಕೆಡವಿದರು. ಇದೇ ವೇಳೆ ಟಿ20ಯಲ್ಲಿ 100 ವಿಕೆಟ್‌ ಪೂರ್ತಿಗೊಳಿಸಿದ ಮೈಲುಗಲ್ಲನ್ನೂ ತಲುಪಿದರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ತಂಡದ ಗೆಲುವಿಗಾಗಿ ಟೊಂಕ ಕಟ್ಟಿನಿಂತ ಮ್ಯಾಟ್ ರೆನ್ಶಾ ಅರ್ಧಶತಕ ಬಾರಿಸಿದರು. ಆದರೆ 65 ರನ್‌ ಗಳಿಸಿದ ವೇಳೆ ವಿಕೆಟ್‌ ಕಳೆದುಕೊಂಡರು. ಅವರ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಆಸೀಸ್‌ ಸೋಲು ಕೂಡ ಖಚಿತವಾಯಿತು. ಉಳಿದಂತೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಎಸೆತವೊಂದರಂತೆ 31 ರನ್‌ ಗಳಿಸಿದರು.

ಪಾಕ್‌ ವಿರುದ್ಧದ ಪಂದ್ಯಕ್ಕೆ ಭಾರತ ಪರ 3 ಬದಲಾವಣೆ ಸಾಧ್ಯತೆ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ ಆರಂಭದಿಂದಲೇ ಉತ್ತಮ ರನ್‌ ಕಲೆಹಾಕಿತು. ಆರಂಭಿಕ ಬ್ಯಾಟರ್‌ ಬ್ರಿಯಾನ್ ಬೆನೆಟ್ ಅಜೇಯ ಅರ್ಧಶತ ಬಾರಿಸಿದರೆ, ತದಿವನಾಶೆ ಮರುಮಾನಿ(35) ಮತ್ತು ರಯಾನ್ ಬರ್ಲ್(35) ಉತ್ತಮ ಸಾಥ್‌ ನೀಡಿದರು. ನಾಯಕ ಸಿಕಂದರ್ ರಾಜಾ 13 ಎಸೆತಗಳಿಂದ ಅಜೇಯ 25 ರನ್‌ ಬಾರಿಸಿದರು. ಬ್ರಿಯಾನ್ ಬೆನೆಟ್ 7 ಬೌಂಡರಿ ನೆರವಿನಿಂದ 65* ರನ್‌ ಗಳಿಸಿದರು. ಆಸ್ಟ್ರೇಲಿಯಾ ಪರ ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಜಲ್‌ವುಡ್‌ ಅವರ ಅನುಪಸ್ಥಿತಿ ಈ ಪಂದ್ಯದಲ್ಲಿ ಕಂಡುಬಂತು.