ನವದೆಹಲಿ, ನ.12: ಐಪಿಎಲ್ 2027ರ ಹೊತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಲಕ್ನೋ ಸೂಪರ್ ಜೈಂಟ್ಸ್ನಲ್ಲಿ ಎರಡು ಋತುಗಳನ್ನು ಕಳೆದ ನಂತರ ಡೆಲ್ಲಿ ತಂಡಕ್ಕೆ ರಿಷಭ್ ಪಂತ್ ಮರಳುತ್ತಿದ್ದಾರೆ. ಆದರೆ, ತಂಡದ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಇನ್ನೂ ಅನಿಶ್ಚಿತವಾಗಿದೆ. ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರ ಪ್ರಕಾರ, ಅಕ್ಷರ್ ಪಟೇಲ್ ನಾಯಕರಾಗಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ. ಹೀಗಾಗಿ ಕೆ.ಎಲ್. ರಾಹುಲ್ ನಾಯಕತ್ವದ ಆಯ್ಕೆಯಾಗಿ ಹೊರಹೊಮ್ಮಬಹುದು ಎಂದಿದ್ದಾರೆ.
ಜಿಯೋಸ್ಟಾರ್ ಸಂದರ್ಶನದಲ್ಲಿ ಮಾತನಾಡಿದ ಚೋಪ್ರಾ, ಪಂತ್ ತಂಡಕ್ಕೆ ಮರಳಿದ್ದರಿಂದ ಕ್ಯಾಪಿಟಲ್ಸ್ ನಾಯಕತ್ವದ ಪಾತ್ರಕ್ಕೆ ಬಹು ಅಭ್ಯರ್ಥಿಗಳನ್ನು ಹೊಂದಿದೆ ಎಂದು ಹೇಳಿದರು.
"ವಾಸ್ತವವಾಗಿ, ಇಲ್ಲಿ ಹಲವು ಪ್ರಶ್ನೆಗಳಿವೆ. ನಾಯಕ ಯಾರು ಎಂಬುದು ಒಂದು ಬಹು ಆಯ್ಕೆಯ ಪ್ರಶ್ನೆಯಂತಾಗಿದೆ. ರಿಷಬ್ ಪಂತ್ ನಾಯಕತ್ವದ ಅಭ್ಯರ್ಥಿಯಾಗಿದ್ದಾರೆ, ಕೆ.ಎಲ್. ರಾಹುಲ್ ಕೂಡ ಒಂದು ಆಯ್ಕೆಯಾಗಿದ್ದಾರೆ. ಅಕ್ಷರ್ ಅವರಿಗೆ ನಾಯಕರಾಗಲು ಇಷ್ಟವಿಲ್ಲ ಎಂಬ ವಿಚಾರ ನನಗೆ ತಿಳಿದಿದೆ. ಹೀಗಾಗಿ, ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಸ್ಪಷ್ಟವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ನಾಯಕರಾಗುವ ಸಾಧ್ಯತೆಯೇ ಹೆಚ್ಚಿದೆ" ಎಂದು ಚೋಪ್ರಾ ಹೇಳಿದರು.
2025ರ ಐಪಿಎಲ್ ಆವೃತ್ತಿಗೂ ಮುನ್ನ ಪಂತ್ ಲಕ್ನೋ ತಂಡಕ್ಕೆ ತೆರಳಿದ ನಂತರ, ಅಕ್ಷರ್ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಈ ಆಲ್ರೌಂಡರ್ 2025ರಲ್ಲಿ ತಮ್ಮ ನಾಯಕತ್ವದ ಅವಧಿಯನ್ನು ಭರವಸೆಯೊಂದಿಗೆ ಆರಂಭಿಸಿ, ತಂಡವು ಆಡಿದ ಮೊದಲ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಸಾಧಿಸುವಂತೆ ಮುನ್ನಡೆಸಿದರು. ಆದರೆ, ಟೂರ್ನಿಯ ದ್ವಿತೀಯಾರ್ಧದಲ್ಲಿ ತಂಡವು ಲಯ ಕಳೆದುಕೊಂಡಿತು. ಅಂತಿಮವಾಗಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ದೆಹಲಿ, ಪ್ಲೇಆಫ್ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು. 2026ರ ಆವೃತ್ತಿಯಲ್ಲೂ ದೆಹಲಿ ತಂಡವು ಆರನೇ ಸ್ಥಾನಕ್ಕೆ ಸೀಮಿತಗೊಂಡು, ಪ್ಲೇಆಫ್ ತಲುಪಲು ವಿಫಲವಾಯಿತು.
ಕುಮಾಮೊಟೊ ಮಾಸ್ಟರ್ಸ್: ಅಚ್ಚರಿಯ ಗೆಲುವು ಸಾಧಿಸಿದ ಶ್ರೀಕಾಂತ್
ರಾಹುಲ್ಗೆ ಐಪಿಎಲ್ ಫ್ರಾಂಚೈಸಿಯಲ್ಲಿ ಎರಡು ತಂಡವನ್ನು ಮುನ್ನಡೆಸಿದ ಹಿಂದಿನ ಅನುಭವವಿದೆ. ಅವರು 2022 ಮತ್ತು 2024ರ ನಡುವೆ ಮೂರು ಋತುಗಳ ಕಾಲ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು ಮತ್ತು ತಮ್ಮ ಮೊದಲ ಎರಡು ಋತುಗಳಲ್ಲಿ ತಂಡವನ್ನು ಪ್ಲೇಆಫ್ ಹಂತಕ್ಕೆ ಕೊಂಡೊಯ್ದಿದ್ದರು. ಆದರೆ, ಐಪಿಎಲ್ 2025ರ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿದ ನಂತರ, ರಾಹುಲ್ ಅವರು ಅಕ್ಷರ್ ಅವರ ನಾಯಕತ್ವದಲ್ಲಿ ಆಡುತ್ತಿದ್ದು, ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿಲ್ಲ.
ಒಂದೊಮ್ಮೆ ರಾಹುಲ್ ನಾಯಕತ್ವದ ಆಫರ್ ತಿರಸ್ಕರಿಸಿದರೆ ಆಗ ಪಂತ್ ಅವರಿಗೆ ಅವಕಾಶ ಸಿಗಬಹುದು ಎಂದು ಚೋಪ್ರಾ ಹೇಳಿದರು.