ಹುಬ್ಬಳ್ಳಿ: ಭಾನುವಾರ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ(Champions Trophy) ಫೈನಲ್ ಪಂದ್ಯದಲ್ಲಿ ಭಾರತ ತಂಡ ಒಂದು ಹಂತದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿತು. ಈ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಮಹಿಳಾ ಅಭಿಮಾನಿಯೊಬ್ಬರು 'ಕೆಎಲ್ ರಾಹುಲ್(KL Rahul) ಬ್ರೋ ಕಾಪಾಡು' ಎಂದು ಬರೆದಿದ್ದ ಬೋರ್ಡ್ ಪ್ರದರ್ಶಿಸಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದೇ ಪೋಸ್ಟರನ್ನು ಹುಬ್ಬಳ್ಳಿ - ಧಾರವಾಡ ಸಿಟಿ ಪೊಲೀಸರು(UBBALLI DHARWAD CITY POLICE) ಅತ್ಯಂತ ಕ್ರಿಯಾತ್ಮಕವಾಗಿ ಬಳಿಸಿಕೊಂಡು ಗಮನ ಸೆಳೆದಿದ್ದಾರೆ.
ಮಹಿಳಾ ಅಭಿಮಾನಿ 'ಕೆಎಲ್ ರಾಹುಲ್ ಬ್ರೋ ಕಾಪಾಡು' ಎಂದು ಬರೆದಿದ್ದ ಬೋರ್ಡ್‌ನ ಫೋಟೊವನ್ನು ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹುಬ್ಬಳ್ಳಿ - ಧಾರವಾಡ ಪೊಲೀಸರು, ನೆನಪಿಡಿ ಸಂಕಷ್ಟದ ಸಮಯದಲ್ಲಿ ಜೆರ್ಸಿ ನಂಬರ್ 1 ಹಾಗೂ ಸಹಾಯವಾಣಿ 112 ಯಾವಾಗಲೂ ಸಹಾಯಕ್ಕೆ ಬರುತ್ತವೆ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿ ತುರ್ತು ಪರಿಸ್ಥಿಯಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ನೀಡುವಂತೆ ಮನವಿ ಮಾಡಿದ್ದಾರೆ. ಹುಬ್ಬಳ್ಳಿ - ಧಾರವಾಡ ಪೊಲೀಸರ ಈ ಕ್ರಿಯಾತ್ಮಕ ಸಲಹೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಇದೇ ಮೊದಲಲ್ಲ
ಹುಬ್ಬಳ್ಳಿ - ಧಾರವಾಡ ಪೊಲೀಸರು ಕ್ರಿಕೆಟ್ ಪಂದ್ಯದ ಕೆಲ ಘಟನೆಗಳನ್ನು ಇದೇ ರೀತಿ ಕ್ರಿಯಾತ್ಮಕವಾಗಿ ಬಳಿಸಿ ಜನರಲ್ಲಿ ಜಾಗೃತ್ತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ವಿಕೆಟ್ ಕಳೆದುಕೊಂಡಿದ್ದರು. ಇದೇ ಸನ್ನಿವೇಶವನ್ನು ಹುಬ್ಬಳ್ಳಿ - ಧಾರವಾಡ ಪೊಲೀಸರು, ಬ್ಯಾಟ್ ಹಾಗೂ ಬಾಲ್ ನಡುವಿನ ಅಂತರ ಕಾಣಿಸದಿದ್ದರೆ ದಯಮಾಡಿ ಇಂದು ರಾತ್ರಿ ರಸ್ತೆಯಲ್ಲಿ ವಾಹನ ಚಲಾಯಿಸಬೇಡಿ’ ಎಂದು ಬರೆದುಕೊಂಡಿದ್ದರು.
ನ್ಯೂಜಿಲ್ಯಾಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಕೊನೆಯ ಕ್ಷಣದಲ್ಲಿ ಸಂಕಷ್ಟಕ್ಕೆ ಸಿಲುಕಿದರೂ ಕೂಡ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಅಜೇಯ 34 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಕೆ.ಎಲ್ ರಾಹುಲ್ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ 5ನೇ ಕನ್ನಡಿಗ ಎನಿಸಿದರು. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವಿನಯ್ ಕುಮಾರ್ ಈ ಹಿಂದಿನ ಸಾಧಕರು.
ಇದನ್ನೂ ಓದಿ IND vs NZ Final: ಚಾಂಪಿಯನ್ ಟ್ರೋಫಿ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಮೋದಿ, ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರು ಕೂಡ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸುವಾಗ ರಾಹುಲ್ ಅವರನ್ನು ವಿಶೇಷವಾಗಿ ಕೊಂಡಾಡಿದರು. ʼಪ್ರತಿ ಪಂದ್ಯದಲ್ಲೂ ರನ್ ಗಳಿಸುತ್ತಾ, ನಿರಂತರವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ ನಾಡಿನ ಮನೆಮಗ ಕೆ.ಎಲ್. ರಾಹುಲ್ ಆಟ ಹೆಚ್ಚು ಖುಷಿಕೊಟ್ಟಿದೆ' ಎಂದು ಮೆಚ್ಚುಗೆ ಸೂಚಿಸಿದ್ದರು.