ಬೆಂಗಳೂರು, ಮಾ.19: ಬಹುನಿರೀಕ್ಷಿತ ಐಪಿಎಲ್‌ನ 19ನೇ(IPL 2026) ಆವೃತ್ತಿ ಮಾ.28ಕ್ಕೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಇದಕ್ಕಾಗಿ ಬಹುತೇಕ ಎಲ್ಲಾ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಟೂರ್ನಿ ಆರಂಭಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ(Most sixes For Indian Premier League) ವಿವರವನ್ನು ಇಲ್ಲಿ ನೀಡಲಾಗಿದೆ.
ಕ್ರಿಸ್ ಗೇಲ್
ವೆಸ್ಟ್ ಇಂಡೀಸ್‌ನ ಹೊಡಿ-ಬಡಿ ಆಟಗಾರ ಕ್ರಿಸ್ ಗೇಲ್ ಅವರು ಐಪಿಎಲ್‌ನಿಂದ ನೀವೃತ್ತಿ ಪಡೆದು ಕೆಲವು ವರ್ಷಗಳು ಕಳೆದರೂ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದಾರೆ. 2009ರಿಂದ 2021ರ ತನಕ ಮೂರು ಫ್ರಾಂಚೈಸಿಗಳ ಪರ ಆಡಿದ್ದ ಗೇಲ್ 357 ಸಿಕ್ಸರ್ ಸಿಡಿಸಿದ್ದಾರೆ.
ರೋಹಿತ್ ಶರ್ಮ
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಅವರು ಈ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರೋಹಿತ್, ಇದುವರೆಗೆ 302* ಸಿಕ್ಸರ್ ಬಾರಿಸಿದ್ದಾರೆ. ಬಾರಿ ತಮ್ಮ ಸಿಕ್ಸರ್‌ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅವಕಾಶ ಅವರ ಮುಂದಿದೆ.
ವಿರಾಟ್ ಕೊಹ್ಲಿ
ಕಿಂಗ್ ಖ್ಯಾತಿಯ, ಐಪಿಎಲ್ ಆರಂಭವಾದಾಗಿನಿಂದ ಈವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಪರವೇ ಆಡುತ್ತಿರುವ ವಿರಾಟ್ ಕೊಹ್ಲಿ ಅವರು ಅತ್ಯಧಿಕ ಸಿಕ್ಸರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದುವರೆಗೆ 267* ಪಂದ್ಯಗಳನ್ನಾಡಿ 291* ಸಿಕ್ಸರ್ ಬಾರಿಸಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ 9 ಸಿಕ್ಸರ್ ಸಿಡಿಸಿದರೆ ಮುನ್ನೂರರ ಗಡಿ ತಲುಪಲಿದ್ದಾರೆ.
ಎಂ.ಎಸ್ ಧೋನಿ
5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರು 278* ಐಪಿಎಲ್ ಪಂದ್ಯಗಳನ್ನಾಡಿ 264* ಸಿಕ್ಸರ್ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 44 ವರ್ಷದ ಧೋನಿ, ಮೂರು ವರ್ಷಗಳ ಹಿಂದೆಯೇ ನಿವೃತ್ತಿ ಪಡೆಯಲು ಯೋಚಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಟೂರ್ನಿಯಲ್ಲಿ ಆಡಲು ನಿರ್ಧರಿಸಿದರು. ಈ ಬಾರಿ ಅವರು ವಿದಾಯ ಹೇಳುವ ಸಾಧ್ಯತೆ ಇದೆ.
ಎಬಿ ಡಿವಿಲಿಯರ್ಸ್
ಆರ್‌ಸಿಬಿ ತಂಡದ ಮಾಜಿ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ಈ ಯಾದಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಎರಡು ಫ್ರಾಂಚೈಸಿಗಳ ಪರ ಆಡಿರುವ ಎಬಿಡಿ, 251 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಡೆಲ್ಲಿ ತಂಡದ ಪರ ಆಡುವ ಮೂಲಕ ಐಪಿಎಲ್ ಜರ್ನಿ ಆರಂಭಿಸಿದ ಅವರು, 2021ರಲ್ಲಿ ನಿವೃತ್ತಿ ಘೋಷಿಸಿದ್ದರು.