ನವದೆಹಲಿ, ಮಾ.18: 2025-26ನೇ ಸಾಲಿನ ಆಟಗಾರರ ಕೇಂದ್ರೀಯ ಗುತ್ತಿಗೆ ವ್ಯವಸ್ಥೆಯಲ್ಲಿ ಬಿಸಿಸಿಐ ಮತ್ತೆ ಪರಿಷ್ಕರಣೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ. ಇತ್ತೀಚೆಗೆ ಪ್ರಕಟಿಸಿದ್ದ ವೇತನ ಪಟ್ಟಿಯಲ್ಲಿ ಎ+ ಶ್ರೇಣಿಯನ್ನು ಕೈಬಿಡಲಾಗಿತ್ತು. ಇದೀಗ ಎ+ ಶ್ರೇಣಿಗೆ ಜಸ್‌ಪ್ರೀತ್ ಬುಮ್ರಾ ಅವರನ್ನು ಸೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಎ+ ಶ್ರೇಣಿಯಡಿ ಬರುವ ಆಟಗಾರ ವಾರ್ಷಿಕ ₹7 ಕೋಟಿ ಮೊತ್ತ ಪಡೆಯುತ್ತಾರೆ. ಎ ಶ್ರೇಣಿಯಲ್ಲಿರುವ ಆಟಗಾರರು ₹5 ಕೋಟಿ, ಬಿ ಶ್ರೇಣಿಯಲ್ಲಿರುವ ಆಟಗಾರರು ₹3 ಕೋಟಿ ಹಾಗೂ ಸಿ ಶ್ರೇಣಿಯಲ್ಲಿರುವ ಆಟಗಾರರು ₹1 ಕೋಟಿ ಪಡೆಯುತ್ತಾರೆ.
ಈ ಹಿಂದಿನ ಎ+ ಶ್ರೇಣಿಯಲ್ಲಿ ನಾಲ್ವರು ಆಟಗಾರರು (ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜ) ಮಾತ್ರ ಸ್ಥಾನ ಪಡೆದಿದ್ದರು. ಆದರೆ ಕೊಹ್ಲಿ ಮತ್ತು ರೋಹಿತ್ ಏಕದಿನ, ಜಡೇಜ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಎ ಪ್ಲಸ್ ಶ್ರೇಣಿಯನ್ನು ಬಿಸಿಸಿಐ ಕೈಬಿಟ್ಟಿತ್ತು. ಇದೀಗ ಬೂಮ್ರಾ ಮಾತ್ರ ಮೂರೂ ಮಾದರಿಯಲ್ಲಿ ಆಡುತ್ತಿರುವ ಕಾರಣ ಅವರನ್ನು ಮತ್ತೆ ಎ+ ಶ್ರೇಣಿಗೆ ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಎಲ್ಲಾ ಮಾದರಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಬುಮ್ರಾ ಅವರನ್ನು ಎ ವರ್ಗಕ್ಕೆ ಸ್ಥಳಾಂತರಿಸಿದ ನಂತರ ಬಿಸಿಸಿಐ ಅವರಿಗೆ ₹ 2 ಕೋಟಿ ನಷ್ಟವನ್ನು ಸರಿದೂಗಿಸಬಹುದು. ಸ್ಥಿರ ಪ್ರದರ್ಶನ ನೀಡುವವರಿಗೆ ಹಿಂದಿನ ಅವಧಿಗೆ ನೀಡಲಾದ ಕನಿಷ್ಠ ಮೊತ್ತವನ್ನು ಮತ್ತು ಅದಕ್ಕಿಂತ ಕಡಿಮೆಯಿಲ್ಲದ ರೀತಿಯಲ್ಲಿ ವೇತನವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಈ ಪರಿಷ್ಕರಣೆಯ ಹಿಂದಿನ ಉದ್ದೇಶವಾಗಿದೆ.
ಐಪಿಎಲ್ ಆಡಲು ಬೆಂಗಳೂರು ತಲುಪಿದ ವಿರಾಟ್ ಕೊಹ್ಲಿ
ಭಾರತದ ಟಿ20ಐ ಉಪನಾಯಕ ಅಕ್ಷರ್ ಪಟೇಲ್ ತಂಡದ ವೈಟ್-ಬಾಲ್ ತಂಡಗಳ ಅವಿಭಾಜ್ಯ ಅಂಗವಾಗಿರುವುದರಿಂದ ಅವರ ಸಂಭಾವನೆಯನ್ನು ಸಹ ಪರಿಷ್ಕರಿಸಬಹುದು. ಬಿಸಿಸಿಐ ಈ ಹಿಂದೆ ಗ್ರೇಡ್ ಎ ಅಥವಾ ಗ್ರೇಡ್ ಬಿ ಗೆ ಅರ್ಹತೆ ಪಡೆಯಲು ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿದ್ದರೂ, ಅವರನ್ನು ಸಿ ಗ್ರೇಡ್ ನಲ್ಲಿ ಇರಿಸಲಾಗಿದೆ. ಇದೀಗ ಅವರನ್ನು ಎ ಅಥವಾ ಬಿ ಗ್ರೇಡ್‌ಗೆ ತರುವ ಸಾಧ್ಯತೆ ಇದೆ.
ಕಳೆದ ತಿಂಗಳು ಬಿಸಿಸಿಐ ಒಟ್ಟು 30 ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ನೀಡಿತ್ತು. ಈ ಪೈಕಿ ಶುಭಮನ್ ಗಿಲ್, ಬುಮ್ರಾ ಮತ್ತು ಜಡೇಜಾ ಸೇರಿದಂತೆ ಮೂವರು ಮಾತ್ರ 'ಎ' ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದರೆ, 11 ಆಟಗಾರರು 'ಬಿ' ಗ್ರೇಡ್‌ನಲ್ಲಿದ್ದಾರೆ, ಉಳಿದವರು 'ಸಿ' ಗ್ರೇಡ್‌ನಲ್ಲಿದ್ದಾರೆ.