ನವದೆಹಲಿ, ಜು.10: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲು ಕೋಚ್ ಗೌತಮ್ ಗಂಭೀರ್ ಅವರ ಹುದ್ದೆ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಬಿಸಿಸಿಐ ಮೂಲದ ಪ್ರಕಾರ, ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಇಬ್ಬರ ಪ್ರದರ್ಶನವನ್ನು ಮಂಡಳಿಯು ನಿರ್ಣಯಿಸಲು ಸಜ್ಜಾಗಿದೆ ಎನ್ನಲಾಗಿದೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಒಪ್ಪಂದವು 2027 ರವರೆಗೆ ನಡೆಯುತ್ತಿದ್ದರೂ, ತಂಡದ ಇತ್ತೀಚಿನ ಪ್ರದರ್ಶನದ ನಂತರ ಅವರ ಸ್ಥಾನವೂ ಪರಿಶೀಲನೆಗೆ ಒಳಪಟ್ಟಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ. ಹೊಸದಾಗಿ ನೇಮಕಗೊಂಡ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ಐದು ಪಂದ್ಯಗಳ ಸರಣಿಯ ನಾಲ್ಕನೇ ಟಿ20ಐನಲ್ಲಿ ಒಂಬತ್ತು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಈ ಗೆಲುವು ಇಂಗ್ಲೆಂಡ್‌ಗೆ ಸರಣಿಯಲ್ಲಿ 3-0 ಮುನ್ನಡೆಯನ್ನು ನೀಡಿತು, ಮೊದಲ ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿತು. ಭಾರತವು ಎರಡನೇ ಟಿ20ಐನಲ್ಲಿ ನಾಲ್ಕು ವಿಕೆಟ್‌ಗಳ ಸೋಲನ್ನು ಅನುಭವಿಸಿತು ಮತ್ತು ಮೂರನೇ ಪಂದ್ಯದಲ್ಲಿ 125 ರನ್‌ಗಳ ಭಾರೀ ಸೋಲನ್ನು ಅನುಭವಿಸಿತು.
ಗಂಭೀರ್ ಅವರ ಅವಧಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಒಂದು ವೇಳೆ ತಂಡ ಮುಂದಿನ ಸರಣಿಯಲ್ಲೂ ವೈಫಲ್ಯ ಅನುಭವಿಸಿದರೆ, ಗಂಭೀರ್ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ. ಕೇವಲ ಏಕದಿನ ತಂಡಕೆ ಮಾತ್ರ ಗಂಭೀರ್‌ನ್ನು ಕೋಚ್ ಆಗಿ ಮುಂದುವರಿಸಲಿರುವ ಬಿಸಿಸಿಐ, ಟೆಸ್ಟ್ ಮತ್ತು ಟಿ20 ತಂಡಕ್ಕೆ ವಿವಿಎಸ್ ಲಕ್ಷ್ಮಣ್‌ರನ್ನು ನೇಮಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಮೊಣಕಾಲಿನ ಗಾಯ; ಮೇಜರ್ ಲೀಗ್‌ನಿಂದ ಹೊರಗುಳಿದ ಆರ್. ಅಶ್ವಿನ್
2026 ರ T20I ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ದಿಢೀರ್ ತಂಡದಿಂದ ಮಾತ್ರವಲ್ಲದೆ ನಾಯಕತ್ವದಿಂದಲೂ ಕೈಬಿಟ್ಟು ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ನೇಮಿಸುವ ಮೂಲಕ ಬಿಸಿಸಿಐ ದಿಟ್ಟ ಬದಲಾವಣೆಯನ್ನು ಮಾಡಿದ ನಂತರ ಈ ಎರಡೂ ಸರಣಿ ಸೋಲುಗಳು ಬಂದಿವೆ.
ಮುಂಬರುವ ಜಿಂಬಾಬ್ವೆ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಲಕ್ಷ್ಮಣ್ ಭಾರತದ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕೋಚ್ ಹುದ್ದೆಯ ಬದಲಾವಣೆ ಬಗ್ಗೆ ಬಿಸಿಸಿಐನಲ್ಲಿ ಈಗಾಗಲೇ ಚರ್ಚೆ ಆರಂಭಗೊಂಡಿದ್ದು, ಮುಂಬರುವ ಭಾರತ ತಂಡದ ಫಲಿತಾಂಶ ಆಧರಿಸಿ ಮತ್ತೆ ಸಭೆ ನಡೆಸಲು ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.