ದುಬೈ, ಅ.18: ಕಳೆದ ವರ್ಷ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆದು, ಜಿಂಬಾಬ್ವೆ ಪರ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಮರಳಿದ ಮಾಜಿ ನಾಯಕ ಬ್ರೆಂಡನ್ ಟೇಲರ್, ಆಫ್ರಿಕನ್ ತಂಡಕ್ಕಾಗಿ ಏಕದಿನ ಕ್ರಿಕೆಟ್ನಲ್ಲಿ (ODI) ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುವ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡರು.
ಯುಎಇಯಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ, ಬಾಂಗ್ಲಾದೇಶದ ವಿರುದ್ಧ ಜಿಂಬಾಬ್ವೆ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ 40 ವರ್ಷದ ವಿಕೆಟ್ಕೀಪರ್-ಬ್ಯಾಟರ್, 101 ಎಸೆತಗಳಲ್ಲಿ 81 ರನ್ ಗಳಿಸಿದರು. ಇವರ ಈ ಆಟದ ನೆರವಿನಿಂದ ಜಿಂಬಾಬ್ವೆ ತಂಡವು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 271 ರನ್ಗಳನ್ನು ಕಲೆಹಾಕಿತು.
ಈ 81 ರನ್ಗಳ ಇನ್ನಿಂಗ್ಸ್ನೊಂದಿಗೆ, ಟೇಲರ್ ಅವರು ಆಂಡಿ ಫ್ಲವರ್ ಅವರ 6,786 ರನ್ಗಳ ದಾಖಲೆಯನ್ನು ಹಿಂದಿಕ್ಕಿ, ತಮ್ಮ ದೇಶಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2015ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ನಲ್ಲಿ ಜಿಂಬಾಬ್ವೆ ತಂಡದ ನಾಯಕರಾಗಿದ್ದ ಟೇಲರ್, ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಬಾಂಗ್ಲಾದೇಶದ ವಿರುದ್ಧ 31 ರನ್ಗಳ ಅಗತ್ಯವಿತ್ತು. ಅವರು ಮೊಸದ್ದೆಕ್ ಹೊಸೈನ್ ಎಸೆದ 16ನೇ ಓವರ್ನ ಐದನೇ ಎಸೆತದಲ್ಲಿ ತಮ್ಮ 31ನೇ ರನ್ ಗಳಿಸಿದರು.
ಜಿಂಬಾಬ್ವೆಯ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಪರಿಗಣಿಸಬಹುದಾದ ಫ್ಲವರ್, 1992 ರಿಂದ 2003 ರವರೆಗೆ 213 ಏಕದಿನ ಪಂದ್ಯಗಳನ್ನು ಆಡಿ 6,786 ರನ್ಗಳನ್ನು ಗಳಿಸಿದ್ದರು. ಇತ್ತ ಟೇಲರ್, 211 ಪಂದ್ಯಗಳ 209 ಇನ್ನಿಂಗ್ಸ್ಗಳಲ್ಲಿ ಒಟ್ಟು 6,837 ರನ್ಗಳನ್ನು ಕಲೆಹಾಕಿದ್ದಾರೆ. ಅವರು 2004 ರಲ್ಲಿ ಜಿಂಬಾಬ್ವೆ ಪರ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
ಛತ್ತೀಸ್ಗಢ ವಿರುದ್ಧ ರಣಜಿ ಆಡಲಿದ್ದಾರೆ ಶುಭಮನ್ ಗಿಲ್
ಜಿಂಬಾಬ್ವೆ ಪರ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ, ಟೇಲರ್ ಮತ್ತು ಫ್ಲವರ್ ನಂತರದ ಸ್ಥಾನಗಳಲ್ಲಿ ಗ್ರಾಂಟ್ ಫ್ಲವರ್ ಮತ್ತು ಹ್ಯಾಮಿಲ್ಟನ್ ಮಸಕಡ್ಜಾ ಇದ್ದಾರೆ. ಗ್ರಾಂಟ್ ತಮ್ಮ 18 ವರ್ಷಗಳ ಏಕದಿನ (ODI) ವೃತ್ತಿಜೀವನವನ್ನು 221 ಪಂದ್ಯಗಳಲ್ಲಿ 6,571 ರನ್ಗಳೊಂದಿಗೆ ಮುಕ್ತಾಯಗೊಳಿಸಿದರೆ, ಮಸಕಡ್ಜಾ ಅವರು 2001 ರಿಂದ 2019 ರ ಅವಧಿಯಲ್ಲಿ 209 ಪಂದ್ಯಗಳಲ್ಲಿ ಒಟ್ಟು 5,658 ರನ್ಗಳನ್ನು ಗಳಿಸಿದರು.
ಪಂದ್ಯದ ಬಗ್ಗೆ ಹೇಳುವುದಾದರೆ ಜಿಂಬಾಬ್ವೆ ತಂಡ ಬಾಂಗ್ಲಾದೇಶವನ್ನು 99 ರನ್ ಅಂತರದಿಂದ ಮಣಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 271 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ, 33.4 ಓವರ್ಗೆ 172 ರನ್ ಗಳಿಸಿ ಆಲೌಟ್ ಆಯಿತು.