ಮಯಾಮಿ, ಜು.19: ಸ್ಟ್ರೈಕರ್ ಬುಕಾಯೊ ಸಕ ಗಳಿಸಿದ ‘ಹ್ಯಾಟ್ರಿಕ್’ ಗೋಲಿನ ನೆರವಿನಿಂದ ಇಂಗ್ಲೆಂಡ್ ತಂಡ ಫ್ರಾನ್ಸ್ ತಂಡವನ್ನು 6-4 ಅಂತರದಿಂದ ಮಣಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಭಾನುವಾರ ಬೆಳಗಿನ ಜಾವ ನಡೆದ 2026ರ ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಸ್ಥಾನದ ಪಂದ್ಯದಲ್ಲಿ ಇಂಗ್ಲೆಂಡ್ ಈ ಸಾಧನೆಗೈದಿತು. ಫ್ರಾನ್ಸ್ ಪರ ನಾಯಕ ಕೈಲಿಯನ್ ಎಂಬಾಪೆ ಗಳಿಸಿದ ಅವಳಿ ಗೋಲು ಬಾರಿಸಿದರೂ ವ್ಯರ್ಥವಾಯಿತು. ಒಟ್ಟಾರೆಯಾಗಿ ಪಂದ್ಯದಲ್ಲಿ 10 ಗೋಲುಗಳು ದಾಖಲಾದವು.
ಪಂದ್ಯ ಆರಂಭಗೊಂಡ ಮೂರೇ ನಿಮಿಷದಲ್ಲಿ ಇಂಗ್ಲೆಂಡ್ ಪರ ಡಿಕ್ಲಾನ್ ರೈಸ್ ಗೋಲು ಬಾರಿಸಿದರು. ಇದಾಗಿ ಎಜ್ರಿ ಕನ್ಸಾ (18ನೇ ನಿಮಿಷ) ಮತ್ತೊಂದು ಗಳಿಸಿದರು. ಮೊದಲಾರ್ಧದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್, 4-0 ಗೋಲುಗಳ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಫ್ರಾನ್ಸ್‌ಗೆ ಉಸಿರುಗಟ್ಟಿಸುವ ಸ್ಥಿತಿಗೆ ತಂದೊಟ್ಟಿತು. 37 ಮತ್ತು 45+1ನೇ ನಿಮಿಷ) ಬ್ಯಾಕ್-ಟು-ಬ್ಯಾಕ್ ಗೋಲು ಬಾರಿಸಿದ್ದ ಬುಕಾಯೊ ಸಕ, ದ್ವಿತೀಯಾರ್ಧದ 87ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿ ತಮ್ಮ ಹ್ಯಾಟ್ರಿಕ್ ಸಂಭ್ರಮ ಪೂರ್ಣಗೊಳಿಸಿದರು.
ದ್ವಿತೀಯಾರ್ಧದಲ್ಲಿ ಫಿನಿಕ್ಸ್‌ನಂತೆ ಎದ್ದು ಬಂದ ಫ್ರಾನ್ಸ್, ಸತತ ಗೋಲುಗಳ ಸುರಿಮಳೆಗೈದಿತು. ಕೈಲಿಯನ್ ಎಂಬಾಪೆ (48 ಮತ್ತು 66ನೇ ನಿಮಿಷ) ಎರಡು ಗೋಲು ಗಳಿಸಿದರೆ, ಬ್ರಾಡ್ಲಿ ಬಾರ್ಕೋಲಾ ಮತ್ತು ಒಸ್ಮಾನೆ ಡೆಂಬೆಲೆ ತಲಾ ಒಂದು ಗೋಲು ಗಳಿಸಿ ಇಂಗ್ಲೆಂಡ್ ಪಾಳಯದಲ್ಲಿ ಆತಂಕ ಸೃಷ್ಟಿಸಿದರು. ಒಂದು ಹಂತದಲ್ಲಿ ಸ್ಕೋರ್ 5-4ಕ್ಕೆ ಬಂದು ತಲುಪಿತ್ತು. ಹೆಚ್ಚುವರಿ ಸಮಯದಲ್ಲಿ ಜೂಡ್ ಬೆಲ್ಲಿಂಗ್‌ಹ್ಯಾಮ್(90+8ನೇ ನಿಮಿಷ) ಹೊಡೆದ ಗೋಲು ಆಂಗ್ಲರ ಪಡೆಯ ಗೆಲುವನ್ನು ಖಚಿತಪಡಿಸಿತು.
ಅರ್ಜೆಂಟೀನಾ vs ಸ್ಪೇನ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು
ದಾಖಲೆ ಬರೆದ ಎಂಬಾಪೆ
ಪಂದ್ಯದಲ್ಲಿ ಎರಡು ಗೋಲು ಬಾರಿಸಿದ ಎಂಬಾಪೆ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ (22 ಗೋಲು) ಎಂದೆನಿಸಿದರು. ಅಲ್ಲದೆ ಪ್ರಸಕ್ತ ಟೂರ್ನಿಯಲ್ಲಿ ಗೋಲ್ಡನ್ ಬೂಟ್ ರೇಸ್‌ನಲ್ಲೂ (10 ಗೋಲು) ಮುಂಚೂಣಿಯಲ್ಲಿದ್ದಾರೆ. ಭಾನುವಾರ ತಡರಾತ್ರಿ ನಡೆಯಲಿರುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಸ್ಪೇನ್ ಸವಾಲನ್ನು ಎದುರಿಸಲಿದೆ. ಹೀಗಾಗಿ ಅರ್ಜೆಂಟೀನಾದ ನಾಯಕ ಲಯೊನೆಲ್ ಮೆಸ್ಸಿಗೆ ಎಂಬಾಪೆ ದಾಖಲೆ ಮುರಿಯುವ ಅವಕಾಶವೊಂದಿದೆ. ಮೆಸ್ಸಿ ವಿಶ್ವಕಪ್‌ನಲ್ಲಿ 21 ಗೋಲು ಬಾರಿಸಿದ್ದಾರೆ. ಹಾಲಿ ಆವೃತ್ತಿಯಲ್ಲಿ ಮೆಸ್ಸಿ 8 ಗೋಲು ಬಾರಿಸಿದ್ದಾರೆ. ಎಂಬಾಪೆ ಹಿಂದಿಕ್ಕಿ 'ಗೋಲ್ಡನ್ ಬೂಟ್' ಪಡೆಯಬೇಕಿದ್ದರೆ ಫೈನಲ್‌ನಲ್ಲಿ ಮೆಸ್ಸಿ 3 ಗೋಲು ಬಾರಿಸಬೇಕಿದೆ.