ಲಂಡನ್, ಜೂ. 24: ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಚಾಮರಿ ಅಟಪಟ್ಟು(Chamari Athapaththu) ಐಸಿಸಿ ಮಹಿಳಾ ಟಿ20 ವಿಶ್ವಕಪ್(ICC Women's T20 World Cup 2026) ಪಂದ್ಯದ ರನ್ ಚೇಸ್‌ನಲ್ಲಿ ಶತಕ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
ಮಂಗಳವಾರ ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರ ಗ್ರೂಪ್ ಬಿ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧದ 131 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಪರ 36 ವರ್ಷದ ಎಡಗೈ ಬ್ಯಾಟರ್ ಚಾಮರಿ, ಬಿರುಸಿನ ಬ್ಯಾಟಿಂಗ್ ಮೂಲಕ 61 ಎಸೆತಗಳಲ್ಲಿ 106 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು 17 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ಶ್ರೀಲಂಕಾವನ್ನು ಒಂಬತ್ತು ವಿಕೆಟ್‌ಗಳ ಜಯಕ್ಕೆ ಕೊಂಡೊಯ್ದರು.
ಅಟಪಟ್ಟು ಅವರ ಶತಕಕ್ಕೂ ಮುನ್ನ, ಮಹಿಳಾ ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಯಶಸ್ವಿ ರನ್ ಚೇಸ್ ವೇಳೆ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಶೆಮೈನ್ ಕ್ಯಾಂಪ್‌ಬೆಲ್ ಹೆಸರಿನಲ್ಲಿತ್ತು. ಸೌತಾಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ 90 ರನ್ ಗಳಿಸಿದ್ದರು. ಹಾಲಿ ಆವೃತ್ತಿಯಲ್ಲೇ ಅವರು ಈ ಸಾಧನೆಗೈದಿದ್ದರು.
'ಜೂನ್ 23 ಎಲ್ಲಾ ರೀತಿಯ ಮ್ಯಾಜಿಕ್ ತರುತ್ತಿದೆ'; ಪದ್ಮಶ್ರೀ ಪ್ರಶಸ್ತಿ ಬಳಿಕ ರೋಹಿತ್ ಪ್ರತಿಕ್ರಿಯೆ
ರನ್ ಚೇಸ್‌ನಲ್ಲಿ ಅತಿ ಹೆಚ್ಚು ಸ್ಕೋರ್‌ಗಳು (ಮಹಿಳಾ ಟಿ20 ವಿಶ್ವಕಪ್)
ಚಾಮರಿ ಅಟಪಟ್ಟು- 106*
ಶೆಮೈನ್ ಕ್ಯಾಂಪ್ಬೆಲ್- 90*
ಮರಿಜಾನ್ನೆ ಕಾಪ್- 81*
ಸಾರಾ ಟೇಲರ್- 76*
ಸೋಫಿ ಡಿವೈನ್- 75*
ಅನ್ನೆಕೆ ಬಾಷ್- 74*
ಈ ಶತಕದೊಂದಿಗೆ ಚಾಮರಿ ಅಟಪಟ್ಟು ಮಹಿಳಾ ಅಂತಾರಾಷ್ಟ್ರೀಯ ಟಿ20ಯಲ್ಲಿ 4ನೇ ಶತಕ ಪೂರ್ತಿಗೊಳಿಸಿದರು. ಅತ್ಯಧಿಕ ಶತಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು. ಯುಎಇಯ ಇಶಾ ಓಜಾ 5 ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.
'ಜೂನ್ 23 ಎಲ್ಲಾ ರೀತಿಯ ಮ್ಯಾಜಿಕ್ ತರುತ್ತಿದೆ'; ಪದ್ಮಶ್ರೀ ಪ್ರಶಸ್ತಿ ಬಳಿಕ ರೋಹಿತ್ ಪ್ರತಿಕ್ರಿಯೆ
ಪಂದ್ಯದ ಬಗ್ಗೆ ಹೇಳುವುದಾದರೆ ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 5 ವಿಕೆಟ್‌ಗೆ 130 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 15.3 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 134 ರನ್ ಬಾರಿಸಿ ಗೆಲುವು ತನ್ನದಾಗಿಸಿತು. ಬಿ ಗುಂಪಿನಲ್ಲಿ 4 ಪಂದ್ಯ ಆಡಿರುವ ಶ್ರೀಲಂಕಾ ಎರಡು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಅಂತಿಮ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಗೆದ್ದರೂ ಪವಾಡವೊಂದು ಸಂಭವಿಸಿದರಷ್ಟೇ ಲಂಕಾಗೆ ಸೆಮಿಫೈನಲ್ ಅವಕಾಶ ಸಿಗಲಿದೆ.