ಬ್ರಿಸ್ಟಲ್: ಶ್ರೀಚರಣಿ ಸ್ಪಿನ್ (Shree Charani) ಮೋಡಿಯ ಹೊರತಾಗಿಯೂ ಫ್ರೆಯಾ ಕೆಂಪ್ (Freya Kemp) ಅವರ ಆಲ್‌ರೌಂಡರ್ ಆಟದ ನೆರವಿನಿಂದ ಇಂಗ್ಲೆಂಡ್ ಮಹಿಳಾ ತಂಡ, ಎರಡನೇ ಟಿ20ಐ ಪಂದ್ಯದಲ್ಲಿ(INDW vs ENGW) ಭಾರತದ ಎದುರು 26 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಸರಣಿಯಲ್ಲಿ ಆತಿಥೇಯರು ಕಮ್‌ಬ್ಯಾಕ್ ಮಾಡಿ 1-1 ಸಮಬಲ ಕಾಯ್ದುಕೊಂಡಿದ್ದಾರೆ. ಮೂರನೇ ಹಾಗೂ ಕೊನೆಯ ಪಂದ್ಯವನ್ನು ಗೆಲ್ಲುವ ತಂಡ ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ. ಬ್ಯಾಟಿಂಗ್‌ನಲ್ಲಿ ಅಜೇಯ 39 ರನ್ ಹಾಗೂ ಬೌಲಿಂಗ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ ಫ್ರೆಯಾ ಕೆಂಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಲ್ಲಿನ ಕೌಂಟಿ ಗ್ರೌಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ ಫ್ರೆಯಾ ಕೆಂಪ್ ಸೇರಿದಂತೆ ಇತರೆ ಬ್ಯಾಟರ್‌ಗಳ ಸಂಘಟಿತ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕೆ 168 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ವನಿತೆಯರು, ಉತ್ತಮ ಆರಂಭ ಪಡೆದರ ಹೊರತಾಗಿಯೂ ಫ್ರೆಯಾ ಕೆಂಪ್ ಅವರ ಬೌಲಿಂಗ್ ದಾಳಿಗೆ ನಲುಗಿ 20 ಓವರ್‌ಗಳನ್ನು ಮುಗಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 142 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.
INDW vs ENGW: ಇಂಗ್ಲೆಂಡ್ ವಿರುದ್ಧ ಮೊದಲನೇ ಟಿ20ಐ ಗೆದ್ದು ಶುಭಾರಂಭ ಮಾಡಿದ ಭಾರತ ವನಿತೆಯರು!
169 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಮಹಿಳಾ ತಂಡ ಯೋಗ್ಯ ಆರಂಭವನ್ನು ಪಡೆದುಕೊಡಿತ್ತು. ಶಫಾಲಿ ವರ್ಮಾ ಔಟ್ ಆಗುವ ಹೊತ್ತಿಗೆ ಭಾರತ 27 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಎರಡನೇ ವಿಕೆಟ್‌ಗೆ ಸ್ಮೃತಿ ಮಂಧಾನಾ ಹಾಗೂ ಯಾಸ್ತಿಕಾ ಭಾಟಿಯಾ 43 ರನ್‌ಗಳ ಜೊತೆಯಾಟವನ್ನು ಆಡಿದರು. 22 ಎಸೆತಗಳಲ್ಲಿ 35 ರನ್ ಗಳಿಸಿ ಸಿಕ್ಕಿದ್ದ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸ್ಮೃತಿ ಮಂಧಾನಾ ಅವರನ್ನು ಫ್ರೆಯಾ ಕೆಂಪ್ ಔಟ್ ಮಾಡಿ ಇಂಗ್ಲೆಂಡ್‌ಗೆ ಕಮ್‌ಬ್ಯಾಕ್ ತಂದುಕೊಟ್ಟಿದ್ದರು.
ಮತ್ತೊಂದೆಡೆ 33 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಯಾಸ್ತಿಕಾ ಭಾಟಿಯಾ ರಿಟೈರ್ ಹರ್ಟ್ ಆಗಿ ಪೆವಿಲಿಯನ್‌ಗೆ ತೆರಳಿದರು. ಇದಾದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣವಾಗಿ ಇಂಗ್ಲೆಂಡ್ ಪರ ತಿರುಗಿತು. 111 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಭಾರತ, ನಂತರ 30 ರನ್ ಅಂತರದಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ಶ್ರೇಯ ಇಂಗ್ಲೆಂಡ್ ಬೌಲರ್‌ಗಳಿಗೆ ಸಲ್ಲಬೇಕು. ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕದೆ ಔಟ್ ಆದರು.
168 ರನ್ ಕಲೆ ಹಾಕಿದ್ದ ಇಂಗ್ಲೆಂಡ್
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿದ್ದ ಇಂಗ್ಲೆಂಡ್ ತಂಡ ಕೂಡ ಯೋಗ್ಯ ಆಟವನ್ನು ಆಡಿದ್ದರು. ಸೋಫಿ ಡಂಕ್ಲಿ (10) ಬೇಗ ಔಟ್ ಆಗಿದ್ದು ಬಿಟ್ಟರೆ ಇನ್ನುಳಿದವರು ಉತ್ತಮ ಪ್ರದರ್ಶನವನ್ನು ತೋರಿದರು. ಡ್ಯಾನಿ ವ್ಯಾಟ್ ಹಾಡ್ಜ್ 29 ರನ್, ಎಮಿ ಜೋನ್ಸ್ 28 ರನ್ ಗಳಿಸಿದರು. ಅಲೈಸ್ ಕಾಪ್ಸಿ 28 ರನ್‌ಗಳನ್ನು ಕಲೆ ಹಾಕಿದ್ದರು. ಹೀದರ್ ನೈಟ್ ಕೂಡ 18 ರನ್‌ಗಳ ಕೊಡಗೆಯನ್ನು ನೀಡಿದರು. ಆದರೆ, ಕೊನೆಯಲ್ಲಿ ಅಬ್ಬರಿದ ಫ್ರೆಯಾ ಕೆಂಪ್, ಕೇವಲ 13 ಎಸೆತಗಳಲ್ಲಿ ಅಜೇಯ 39 ರನ್‌ಗಳನ್ನು ಸಿಡಿಸಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸಿದ್ದರು. ಅಲ್ಲದೆ ಡ್ಯಾನಿಯಲ್ ಗಿಬ್ಸನ್ ಜೊತೆಗೆ 42 ರನ್‌ಗಳ ಮೌಲ್ಯಯುತ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸುವಲ್ಲಿ ನೆರವು ನೀಡಿದರು. ಭಾರತದ ಪರ ಸ್ಪಿನ್ ಮೋಡಿ ಮಾಡಿದ ಶ್ರೀಚರಣಿ 4 ಓವರ್‌ಗಳಿಗೆ ಕೇವಲ 25 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು.