ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2027: ಮಿನಿ ಹರಾಜಿಗೂ ಮುನ್ನ ಮೂವರು ಆಟಗಾರರಿಗೆ ಗೇಟ್‌ ಪಾಸ್‌ ನೀಡಲಿರುವ ಎಸ್‌ಆರ್‌ಎಚ್‌!

2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರರ ರಿಟೆನ್ಷನ್ ಗಡುವಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಹಲವು ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಯಿದೆ. ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ್ದರೂ, ತಂಡದ ಪ್ರಶಸ್ತಿ ಗೆಲ್ಲುವ ಗುರಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ಆಟಗಾರರನ್ನು ಕೈಬಿಡಲು ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಸನ್‌ರೈಸರ್ಸ್‌ ರಿಲೀಸ್‌ ಮಾಡಬಲ್ಲ ಮೂವರು ಆಟಗಾರರು.

ನವದೆಹಲಿ: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 20225) ಮೆಗಾ ಹರಾಜಿಗೂ ಮುನ್ನ ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರಂತಹ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಹೊಸ ಸಂಚಲನ ಮೂಡಿಸಿದ್ದರೂ, ಪ್ಲೇಆಫ್ ಪ್ರವೇಶಿಸುವುದು ಹಾಗೂ ಫೈನಲ್ ತಲುಪುವ ವಿಚಾರದಲ್ಲಿ ತಂಡ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದೆ.

ತಂಡದ ಯಶಸ್ಸಿನಲ್ಲಿ ಸ್ಥಿರತೆ ಪ್ರಮುಖ ಪಾತ್ರ ವಹಿಸುತ್ತದೆ. 2026ರ ಐಪಿಎಲ್‌ನಲ್ಲಿ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಇದರ ಪರಿಣಾಮವಾಗಿ ಮೊದಲ ನಾಲ್ಕು ಪಂದ್ಯಗಳಲ್ಲಿ ಹೈದರಾಬಾದ್ ಕೇವಲ ಒಂದು ಗೆಲುವು ದಾಖಲಿಸಿತ್ತು. ಬಳಿಕ ನಾಯಕ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡ ಬೌಲಿಂಗ್ ವಿಭಾಗದಲ್ಲಿ ಸುಧಾರಿತ ಪ್ರದರ್ಶನ ನೀಡಿ ಭರ್ಜರಿ ಕಮ್‌ಬ್ಯಾಕ್ ಮಾಡಿತ್ತು. ಅಂತಿಮವಾಗಿ ಎಲಿಮಿನೇಟರ್ ಪಂದ್ಯಕ್ಕೆ ಅರ್ಹತೆ ಪಡೆದರೂ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿತ್ತು.

ತಂಡದ ಈ ಹಿಂದಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸನ್‌ರೈಸರ್ಸ್ ಹೈದರಾಬಾದ್ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಪ್ರಮುಖ ಆಟಗಾರರ ಟ್ರೇಡ್ ಡೀಲ್‌ ಮಾಡಿಕೊಂಡಿದೆ. ಇದರ ಭಾಗವಾಗಿ ಖಲೀಲ್ ಅಹ್ಮದ್ ಹಾಗೂ ನೇಥನ್ ಎಲ್ಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದಾಗಿ ಆಗಾಗ್ಗೆ ಸಮಸ್ಯೆ ಎದುರಿಸುತ್ತಿದ್ದ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ.

IPL 2027: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳಿಗೆ ಶಾಕ್‌, 40 ಕೋಟಿ ರು.ಗೆ ಡಿಮ್ಯಾಂಡ್‌ ಮಾಡಿದ ಸ್ಟಾರ್‌ ಆಟಗಾರರು!

ಬ್ಯಾಟಿಂಗ್ ವಿಭಾಗದಲ್ಲಿ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಐದನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟರ್ ಹುಡುಕುವ ಸಾಧ್ಯತೆಯಿದ್ದು, ಅನಿಕೇತ್ ಅವರನ್ನು ಮತ್ತೊಮ್ಮೆ ಆ ಸ್ಥಾನದಲ್ಲಿ ಆಡಿಸುವ ಬಗ್ಗೆಯೂ ಚಿಂತನೆ ನಡೆಸಬಹುದು. ನಿತೀಶ್ ಕುಮಾರ್ ರೆಡ್ಡಿ ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ನಿರೀಕ್ಷೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಆಡಬಲ್ಲ ಸಲಿಲ್ ಅರೋರಾ ಕೂಡ ತಂಡದ ಮತ್ತೊಂದು ಭರವಸೆಯ ಆಟಗಾರರಾಗಿದ್ದಾರೆ.

ಬ್ಯಾಟಿಂಗ್ ವಿಭಾಗ ಬಹುತೇಕ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಬೌಲಿಂಗ್ ಪಡೆಯನ್ನು ಬಲಪಡಿಸುವತ್ತ ಹೈದರಾಬಾದ್ ಗಮನಹರಿಸಲಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ರಿಟೆನ್ಷನ್ ಗಡುವಿಗೂ ಮುನ್ನ ಕೆಲವು ಪ್ರಮುಖ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ.

IPL 2027: ಸಿಎಸ್‌ಕೆಗೆ ಲಿಯಾಮ್ ಲಿವಿಂಗ್‌ಸ್ಟೋನ್ ಎಂಟ್ರಿ; ಎಸ್‌ಆರ್‌ಎಚ್‌ ಜೊತೆ ಚೆನ್ನೈ ಟ್ರೇಡ್‌ ಡೀಲ್‌!

ಸನ್‌ರೈಸರ್ಸ್ ಹೈದರಾಬಾದ್ ಕೈಬಿಡಬಹುದಾದ ಮೂವರು ಆಟಗಾರರು

1.ಪ್ಯಾಟ್ ಕಮಿನ್ಸ್

ಹೈದರಾಬಾದ್ ತಂಡ ತನ್ನ ನಾಯಕ ಪ್ಯಾಟ್ ಕಮಿನ್ಸ್ ಅವರನ್ನೇ ಕೈಬಿಡಲಿದೆಯೇ ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ. 2027ರಲ್ಲಿ ಆಸ್ಟ್ರೇಲಿಯಾ ತಂಡ ಆ್ಯಶಸ್ ಸರಣಿ ಹಾಗೂ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸಲಿದೆ. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಕಮಿನ್ಸ್, ಐಪಿಎಲ್‌ನಲ್ಲಿ ಸಂಪೂರ್ಣವಾಗಿ ಲಭ್ಯವಿರದ ಸಾಧ್ಯತೆಯಿದೆ.

ಇಂತಹ ಪರಿಸ್ಥಿತಿಯಲ್ಲಿ 18 ಕೋಟಿ ನೀಡಿ ಉಳಿಸಿಕೊಂಡಿರುವ ಕಮಿನ್ಸ್ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಹೈದರಾಬಾದ್ ಚಿಂತನೆ ನಡೆಸಬಹುದು. ಈ ಮೊತ್ತ ಫ್ರಾಂಚೈಸಿಯ ಹರಾಜಿನ ಪರ್ಸ್‌ಗೆ ದೊಡ್ಡ ಬಲ ನೀಡಲಿದೆ.

ಆದರೆ ಕಮಿನ್ಸ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಫ್ರಾಂಚೈಸಿ ಹಾಗೂ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಅವರೊಂದಿಗೆ ಕಮಿನ್ಸ್ ಉತ್ತಮ ಸಂಬಂಧ ಹೊಂದಿದ್ದಾರೆ. ಭವಿಷ್ಯದ ಯೋಜನೆಗಳಲ್ಲಿ ಕಮಿನ್ಸ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ತಂಡ ಭಾವಿಸಿದರೆ ಅವರನ್ನು ಮತ್ತೆ ಉಳಿಸಿಕೊಳ್ಳಬಹುದು.

IPL 2027: ಪಂಜಾಬ್‌ ಕಿಂಗ್ಸ್‌ಗೆ ಹಾರ್ದಿಕ್‌ ಪಾಂಡ್ಯ, ಮುಂಬೈ ಇಂಡಿಯನ್ಸ್‌ಗೆ ಅರ್ಷದೀಪ್‌ ಸಿಂಗ್‌?

2.ಹರ್ಷಲ್‌ ಪಟೇಲ್‌

ಭಾರತದ ವೇಗಿ ಹರ್ಷಲ್ ಪಟೇಲ್ ಅವರ ಪ್ರದರ್ಶನ ಇತ್ತೀಚಿನ ವರ್ಷಗಳಲ್ಲಿ ಕುಸಿತ ಕಂಡಿದೆ. ಇದೇ ಕಾರಣದಿಂದ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಟಿ. ನಟರಾಜನ್ ಅವರನ್ನು ತಂಡಕ್ಕೆ ಕರೆತಂದಿರುವ ಹೈದರಾಬಾದ್, ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಮತ್ತೊಬ್ಬ ಆಯ್ಕೆಯನ್ನು ಹೊಂದಿದೆ. ಜೀಶನ್ ಅನ್ಸಾರಿ ಅವರ ಬದಲಿಗೆ ಟ್ರೇಡ್ ಮೂಲಕ ನಟರಾಜನ್ ತಂಡ ಸೇರಿದ್ದಾರೆ. ಮತ್ತೊಂದೆಡೆ, ಹರ್ಷಲ್ ಪಟೇಲ್ ಅವರನ್ನು 8 ಕೋಟಿ ರು. ಗೆ ಖರೀದಿಸಲಾಗಿತ್ತು. ಕಳೆದ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿದ್ದ ಅವರು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹರ್ಷಲ್ ಅವರನ್ನು ಬಿಡುಗಡೆ ಮಾಡಿದರೆ ಹರಾಜಿನಲ್ಲಿ ಖರ್ಚು ಮಾಡಲು ಹೈದರಾಬಾದ್ ತಂಡಕ್ಕೆ ₹8 ಕೋಟಿ ಹೆಚ್ಚುವರಿ ಮೊತ್ತ ಲಭ್ಯವಾಗಲಿದೆ.

3.ದಿಲ್ಶನ್ ಮಧುಶಂಕ

ಬ್ರೈಡನ್ ಕಾರ್ಸ್ ಗಾಯಗೊಂಡಿದ್ದರಿಂದ ಅವರ ಬದಲಿಯಾಗಿ ಶ್ರೀಲಂಕಾದ ವೇಗಿ ದಿಲ್ಶನ್ ಮಧುಶಂಕ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿಸಿಕೊಂಡಿತ್ತು. 75 ಲಕ್ಷಕ್ಕೆ ತಂಡದ ಭಾಗವಾಗಿದ್ದ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದರೂ 36 ರನ್ ಬಿಟ್ಟುಕೊಟ್ಟಿದ್ದರು. ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರೂ, ತಂಡದಲ್ಲಿ ಈಗಾಗಲೇ ಸಾಕಷ್ಟು ಗುಣಮಟ್ಟದ ವೇಗದ ಬೌಲರ್‌ಗಳಿರುವುದರಿಂದ ಮಧುಶಂಕ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.