ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದ ಟಿ20ಐ ಸರಣಿಗಳ ಭಾರತ ತಂಡಕ್ಕೆ ಭುವನೇಶ್ವರ್ ಕುಮಾರ್‌ಗೆ (Bhuvneshwar Kumar) ಅವಕಾಶವನ್ನು ನೀಡಲಾಗಿಲ್ಲ. ಈ ಬಗ್ಗೆ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಭುವಿಗೆ ಭಾರತ ತಂಡದಲ್ಲಿ ಅವಕಾಶ ನೀಡಿಲ್ಲವಾದರೆ, ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಬಹುತೇಕ ಮುಗಿದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಸಿರಾಜ್‌ಗೆ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ನಿಮಿತ್ತ ಟಿ20ಐ ಸರಣಿಗಳಿಂದ ವಿಶ್ರಾಂತಿ ನೀಡುವ ಮೂಲಕ ಅವರ ಸ್ಥಾನಕ್ಕೆ ಕನ್ನಡಿಗ ಪ್ರಸಿಧ್ ಕೃಷ್ಣ ಅವರಿಗೆ ಭಾರತ ಟಿ20 ತಂಡದಲ್ಲಿ ಅವಕಾಶ ನೀಡಲಾಗಿದೆ. ಆ ಮೂಲಕ ಆಯ್ಕೆದಾರರು ಮತ್ತೊಮ್ಮೆ ಭುವನೇಶ್ವರ್ ಕುಮಾರ್ ಅವರನ್ನು ಮರೆತಿದ್ದಾರೆ. 2022ರಲ್ಲಿ ಭುವನೇಶ್ವರ್ ಕುಮಾರ್ ಕೊನೆಯ ಬಾರಿ ಭಾರತದ ಪರ ಅಂತಾರಾಷ್ಟ್ರೀಯ ಟಿ20ಐ ಪಂದ್ಯವನ್ನು ಆಡಿದ್ದರು.
ಯಶಸ್ವಿ ಜೈಸ್ವಾಲ್ ಔಟ್, ಇಶಾನ್ ಕಿಶನ್ ಇನ್; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, "ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಹಾಗಾಗಿ ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನ ಮುಗಿದಿದಿಯಾ? ಏಕೆಂದರೆ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ನೀವು ಮೊಹಮ್ಮದ್ ಸಿರಾಜ್ ಅವರ ಸ್ಥಾನಕ್ಕೆ ಪ್ರಸಿಧ್ ಕೃಷ್ಣ ಅವರನ್ನು ಆರಿಸಲಾಗಿದೆ. ಆರಂಭದಲ್ಲಿಯೂ ಭುವನೇಶ್ವರ್ ಕುಮಾರ್ ಅವರನ್ನು ಆರಿಸುವ ಸಾಧ್ಯತೆ ಇತ್ತು ಹಾಗೂ ಈಗಲೂ ಅವಕಾಶವಿತ್ತು. ಆದರೆ, ಬಿಸಿಸಿಐ ಬೇರೆ ಆಟಗಾರನನ್ನು ಆಯ್ಮೆ ಮಾಡಿದೆ," ಎಂದು ತಿಳಿಸಿದ್ದಾರೆ.
ಕೌಂಟಿ ಪಂದ್ಯಗಳಿಗೆ ವಾರ್ವಿಕ್‌ಷೈರ್ ತಂಡದ ಜತೆ ಮಾನವ್ ಸುತಾರ್ ಒಪ್ಪಂದ
2026ರ ಐಪಿಎಲ್ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್ ಪ್ರದರ್ಶನ
2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಭುವನೇಶ್ವರ್ ಕುಮಾರ್ ಅವರು 16 ಪಂದ್ಯಗಳಿಂದ 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದರು. 29 ವಿಕೆಟ್ ಪಡೆದಿದ್ದ ಕಗಿಸೊ ರಬಾಡ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಭುವನೇಶ್ವರ್ ಕುಮಾರ್ ಕೂಡ ಮಹತ್ವದ ಕೊಡುಗೆಯನ್ನು ನೀಡಿದ್ದರು.
ಒಂದು ಕಾಲದಲ್ಲಿ ಭಾರತದ ಮೂರು ಮಾದರಿಗಳ ಕ್ರಿಕೆಟ್‌ಗೂ ಪ್ರಮುಖ ವೇಗದ ಬೌಲರ್ ಆಗಿದ್ದ ಭುವನೇಶ್ವರ್ ಕುಮಾರ್ ಟೆಸ್ಟ್ ಕ್ರಿಕೆಟ್‌ನಲ್ಲಿ 21 ಪಂದ್ಯಗಳಿಂದ 63 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 121 ಪಂದ್ಯಗಳಲ್ಲಿ 141 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ 2022ರ ಜನವರಿಯಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.
2022ರ ಟಿ20 ವಿಶ್ವಕಪ್ ತಂಡದ ಸದಸ್ಯರಾಗಿದ್ದ ಭುವನೇಶ್ವರ್ ಕುಮಾರ್, ಅದೇ ವರ್ಷದ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಟಿ20ಐ ಪಂದ್ಯವನ್ನಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ, ಅವರು ದೇಶಿ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಸಕ್ರಿಯವಾಗಿ ಆಡುತ್ತಿದ್ದು, ತಮ್ಮ ಅನುಭವವನ್ನು ಮುಂದುವರಿಸುತ್ತಿದ್ದಾರೆ.