ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

U19 Asia Cup 2026: ಯುಎಇ ವಿರುದ್ಧ ಭರ್ಜರಿ ಶತಕ ಬಾರಿಸಿದ ಜೂನಿಯರ್‌ ಸೆಹ್ವಾಗ್‌!

ಯುಎಇ ವಿರುದ್ಧದ ಅಂಡರ್-19 ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಆರ್ಯವೀರ್ ಸೆಹ್ವಾಗ್ 131 ಎಸೆತಗಳಲ್ಲಿ 13 ಬೌಂಡರಿ, ಎರಡು ಸಿಕ್ಸರ್‌ಗಳ ನೆರವಿನಿಂದ ಶತಕ ಸಿಡಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಸೋಲಿನ ಬಳಿಕ ಭಾರತಕ್ಕೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಗಮನ ಸೆಳೆದಿದೆ.

ಯುಎಇ ವಿರುದ್ಧ ಭರ್ಜರಿ ಶತಕ ಸಿಡಿಸಿದ ಆರ್ಯವೀರ್‌ ಸೆಹ್ವಾಗ್‌.

ನವದೆಹಲಿ: ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ (Aaryavir Sehwag) ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ (U19 Asia Cup 2026) ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಯುಎಇ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆ ಮೂಲಕ ತಮ್ಮ ತಂದೆಯ ಹಾದಿಯಲ್ಲಿ ಆರ್ಯವೀರ್‌ ಹೆಜ್ಜೆ ಹಾಕುತ್ತಿದ್ದಾರೆ.

ನವೆಂಬರ್ 10ರಂದು ಒಮಾನ್‌ನ ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ಆರ್ಯವೀರ್ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದರು. ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದ ಅವರು, ನಂತರ ರನ್ ಗಳಿಕೆಯ ವೇಗ ಹೆಚ್ಚಿಸಿದರು. 131 ಎಸೆತಗಳಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಇದು ಅವರ ಅಂಡರ್-19 ಏಕದಿನ ವೃತ್ತಿಜೀವನದ ಮೊದಲ ಶತಕವಾಗಿದೆ.

IND vs NZ: ಮಳೆಯಿಂದ ಹ್ಯಾಮಿಲ್ಟನ್ ಪಂದ್ಯ ರದ್ದು; ಏಕದಿನ ಸರಣಿಯಲ್ಲಿ ಗಿಲ್‌-ರಾಹುಲ್ ಅಭಿಯಾನ ಅಂತ್ಯ!

ನಿರ್ಣಾಯಕ ಪಂದ್ಯದಲ್ಲಿ ಮಹತ್ವದ ಆಟ

ಪಾಕಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಆರ್ಯವೀರ್ ಕೇವಲ 22 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಆದರೆ ಯುಎಇ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡುವ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿದ್ದು, ಸೋತರೆ ಟೂರ್ನಿಯಿಂದ ಹೊರಬೀಳುವ ಆತಂಕವಿತ್ತು. ಭಾರತದ ನಾಯಕ ಲಕ್ಷ್ಯ ರಾಜೇಶ್ ರಾಯಚಂದಾನಿ 17 ರನ್ ಗಳಿಸಿ ಔಟಾದರೂ, ಆರ್ಯವೀರ್ ತಮ್ಮ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ವಿಕೆಟ್ ಪತನದ ಬಳಿಕವೂ ಎಚ್ಚರಿಕೆಯಿಂದ ಬ್ಯಾಟಿಂಗ್ ಮುಂದುವರಿಸಿ ಶತಕದ ಗಡಿ ತಲುಪಿದರು.

ನೇಪಾಳ ವಿರುದ್ಧವೂ ಮಿಂಚಿದ್ದ ಆರ್ಯವೀರ್

ಈ ಟೂರ್ನಿಯಲ್ಲಿ ಆರ್ಯವೀರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನವೆಂಬರ್ 6ರಂದು ನೇಪಾಳ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅವರು ಅಜೇಯ 70 ರನ್ ಗಳಿಸಿದ್ದರು. ಇದೀಗ ಯುಎಇ ವಿರುದ್ಧ ಶತಕ ಸಿಡಿಸುವ ಮೂಲಕ ಟೂರ್ನಿಯಲ್ಲಿ ತಮ್ಮ ಎರಡನೇ ಗಮನಾರ್ಹ ಇನಿಂಗ್ಸ್ ದಾಖಲಿಸಿದ್ದರು. ವೀರೇಂದ್ರ ಸೆಹ್ವಾಗ್ ಅವರಂತೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯದ ಸುಳಿವು ನೀಡಿರುವ ಆರ್ಯವೀರ್, ಈ ಶತಕದ ಮೂಲಕ ಭಾರತದ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.



160 ರನ್‌ ದಾಖಲಿಸಿದ ಆರ್ಯವೀರ್‌

ಶತಕ ಪೂರ್ಣಗೊಳಿಸಿದ ಬಳಿಕವೂ ಆರ್ಯವೀರ್‌ ತಮ್ಮ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ಮುಂದುವರಿಸಿದರು. ಅವರು ಆಡಿದ 168 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 17 ಬೌಂಡರಿಗಳೊಂದಿಗೆ 160 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು. ಇವರ ಜೊತೆಗೆ ವಿಕೆ ವಿನೀತ್‌ 69 ಎಸೆತಗಳಲ್ಲಿ 67 ರನ್‌ಗಳನ್ನು ಕಲೆ ಹಾಕಿದರು. ಅಂತಿಮವಾಗಿ ಭಾರತ ತಂಡ, 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 309 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಯುಎಇಗೆ 310 ರನ್‌ಗಳ ಗುರಿಯನ್ನು ನೀಡಿತು.