ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ಸಿಕ್ಸರ್‌ ಸಿಡಿಸಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ!

IND vs ENG: ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

100 ಸಿಕ್ಸರ್‌ ಪೂರ್ಣಗೊಳಿಸಿದ ಅಭಿಷೇಕ್‌ ಶರ್ಮಾ.

ಚೆಸ್ಟರ್‌ ಲೀ ಸ್ಟ್ರೀಟ್‌: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಣ ಟಿ20ಐ ಸರಣಿಯ ಮೊದಲನೇ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) ಅವರು ಸ್ಪೋಟಕ ಬ್ಯಾಟಿಂಗ್‌ ನಡೆಸಿದರು. ಆ ಮೂಲಕ ಅರ್ಧಶತಕವನ್ನು ಬಾರಿಸುವ ಮೂಲಕ ತಮ್ಮ ಟಿ20ಐ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ.

ಇಲ್ಲಿನ ರಿವರ್‌ಸೈಡ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ತಮ್ಮ ಆರಂಭಿಕ 9 ಎಸೆತಗಳಲ್ಲಿಯೇ ಎರಡು ಸಿಕ್ಸರ್‌ ಸಿಡಿಸಿ ಈ ದಾಖಲೆಯನ್ನು ಬರೆದರು. ತಮ್ಮ ಟಿ20ಐ ವೃತ್ತಿ ಜೀವನದಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಎಡಗೈ ಬ್ಯಾಟ್ಸ್‌ಮನ್‌ 785 ಎಸೆತಗಳನ್ನು ತೆಗೆದುಕೊಂಡಿದ್ದಾರೆ.

ಪಂಜಾಬ್‌ ಮೂಲದ ಬ್ಯಾಟ್ಸ್‌ಮನ್‌, ವೆಸ್ಟ್‌ ಇಂಡೀಸ್‌ ಮಾಜಿ ಬ್ಯಾಟ್ಸ್‌ಮನ್‌ ಎವಿನ್‌ ಲೆವಿಸ್‌ ಅವರನ್ನು ಹಿಂದಿಕ್ಕಿದ್ದಾರೆ. ವಿಂಡೀಸ್‌ ಬ್ಯಾಟರ್‌ ತಮ್ಮ ವೃತ್ತಿ ಬದುಕಿನಲ್ಲಿ 789 ಎಸೆತಗಳಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದರು. ಇದೀಗ ಅಭಿಷೇಕ್‌ ಈ ದಾಖಲೆಯನ್ನು ಬರೆಯಲು 4 ಎಸೆತಗಳನ್ನು ಕಡಿಮೆ ತೆಗೆದುಕೊಂಡಿದ್ದಾರೆ. ನ್ಯೂಜಿಲೆಂಡ್‌ ತಂಡದ ಫಿನ್‌ ಆಲೆನ್‌ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಈ ವರ್ಷದ ಫೆಬ್ರವರಿ ತಿಂಗಳಲ್ಲಿ 871 ಎಸೆತಗಳನ್ನು ಈ ಮೈಲುಗಲ್ಲು ತಲುಪಿದ್ದರು.

IND vs ENG: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಭಾರತ!

ಸೂರ್ಯಕುಮಾರ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ

ಅಭಿಷೇಕ್‌ ಶರ್ಮಾ ಅವರು ಭಾರತ ತಂಡದ ಮಾಜಿ ನಾಯಕ ಸೂರ್ಯಕುಮಾರ್‌ ಯಾದವ್‌ ಅವರನ್ನು ಹಿಂದಿಕ್ಕಿದ್ದಾರೆ. ಸೂರ್ಯ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು 1007 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಕಡಿಮೆ ಇನಿಂಗ್ಸ್‌ಗಳಲ್ಲಿ ಈ ದಾಖಲೆ ಬರೆದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಭಿಷೇಕ್‌ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಎಡಗೈ ಬ್ಯಾಟರ್‌ 48 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ವಿಂಡೀಸ್‌ ಮಾಜಿ ಬ್ಯಾಟರ್‌ ಎವಿನ್‌ ಲೆವಿಸ್‌ ಕೇವಲ 42 ಇನಿಂಗ್ಸ್‌ಗಳ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.

2024ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಭಿಷೇಕ್‌ ಶರ್ಮಾ, ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ವಿಶ್ವದ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಕಳೆದ ವಿಶ್ವಕಪ್‌ ಋತುವಿನಲ್ಲಿ ಅವರು ತಮ್ಮ ಬ್ಯಾಟಿಂಗ್‌ ಮೂಲಕ ಮಿಂಚಿದ್ದಾರೆ. ಆ ಮೂಲಕ ಐಸಿಸಿ ಟಿ20ಐ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಅಭಿ ಅರ್ಧಶತಕ ಸಿಡಿಸಿದ್ದರು. ತಮ್ಮ ಟಿ20ಐ ವೃತ್ತಿ ಜೀವನದಲ್ಲಿ ಅವರು 190ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ 1450 ರನ್‌ಗಳನ್ನು ಗಳಿಸಿದ್ದಾರೆ.



ವೈಭವ್‌ ಸೂರ್ಯವಂಶಿಗೆ ಅಗ್ರ ಸ್ಥಾನ

ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 100 ಸಿಕ್ಸರ್‌ ಪೂರ್ಣಗೊಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವೈಭವ್‌ ಸೂರ್ಯವಂಶಿ ಇದ್ದಾರೆ. ಅವರು ಕೇವಲ 515 ಎಸೆತಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. 2026ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡುವಾಗ ಅವರು ಈ ದಾಖಲೆಯನ್ನು ಬರೆದಿದ್ದರು.



ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ (ಬಾಲ್‌ಗಳಲ್ಲಿ)

785- ಅಭಿಷೇಕ್‌ ಶರ್ಮಾ

789 –ಎವಿನ್‌ ಲೆವಿಸ್‌

848 –ಕರಣ್‌ಭೀರ್‌ ಸಿಂಗ್‌

871 –ಫಿನ್‌ ಆಲೆನ್‌

931 –ಟಿಮ್‌ ಡೇವಿಡ್‌

956 –ಫೈಸಲ್‌ ಖಾನ್

963 –ಕಾಲಿನ್‌ ಮನ್ರೋ

1007 –ಸೂರ್ಯಕುಮಾರ್‌ ಯಾದವ್‌

1058 –ರೊವ್ಮನ್‌ ಪೊವೆಲ್‌

1071 –ಕ್ರಿಸ್‌ ಗೇಲ್‌