ನವದೆಹಲಿ: ಭಾರತ ಟಿ20 ತಂಡದ ಪರ ಅಭಿಷೇಕ್ ಶರ್ಮಾ (Abhishek Sharma) ಹಾಗೂ ಸಂಜು ಸ್ಯಾಮ್ಸನ್ (sanju samson) ಅವರು ಮುಂದಿನ 10 ಪಂದ್ಯಗಳಲ್ಲಿ ಓಪನರ್‌ಗಳಾಗಿ ಮುಂದುವರಿಯಬೇಕೆಂದು ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ (S Badrinath) ಆಗ್ರಹಿಸಿದ್ದಾರೆ. ಈ ಇಬ್ಬರೂ ಆರಂಭಿಕರಿಗಾಗಿ ದೀರ್ಘಾವಧಿ ತಮ್ಮ ಆರಂಭಿಕ ಸ್ಥಾನಗಳಲ್ಲಿ ಬ್ಯಾಟ್ ಮಾಡಲು ಟೀಮ್ ಮ್ಯಾನೇಜ್‌ಮೆಂಟ್ ಅವಕಾಶ ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ. ಆ ಮೂಲಕ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರು ಸ್ವಲ್ಪ ದಿನಗಳ ಕಾಲ ಬೆಂಚ್ ಕಾಯಬೇಕೆಂದು ಅವರು ಹೇಳಿದ್ದಾರೆ.
ಭಾರತ ತಂಡ ಒಂದು ಆರಂಭಿಕ ಜೋಡಿಯನ್ನು ಅಂತಿಮಗೊಳಿಸಿ, ಅದನ್ನು ದೀರ್ಘಕಾಲದವರೆಗೆ ಆಡಿಸಿ, ಅದರ ಪ್ರದರ್ಶನವನ್ನು ಮೌಲ್ಯಮಾಪನ ಮಾಡಬೇಕು ಎಂದು ಬದ್ರಿನಾಥ್ ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗಾಗಿ ಸಂಜು ಸ್ಯಾಮ್ಸನ್ ತಂಡಕ್ಕೆ ಮರಳಿರುವ ಹಿನ್ನೆಲೆಯಲ್ಲಿ, ಜಿಂಬಾಬ್ವೆ ವಿರುದ್ಧದ ಹಿಂದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
“ಈ ಸರಣಿಯ ಬಳಿಕ ಮುಂದಿನ 10 ಟಿ20 ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಆರಂಭಿಕರಾಗಿ ಆಡಬೇಕು. ಆ ಬಳಿಕ ಸಂಜು ಸ್ಯಾಮ್ಸನ್ ವಿಫಲರಾದರೆ ಅವರನ್ನು ಕೈಬಿಟ್ಟು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕು. ಒಂದು ಸರಣಿಯಲ್ಲಿ ಒಬ್ಬರನ್ನು, ಮುಂದಿನ ಸರಣಿಯಲ್ಲಿ ಮತ್ತೊಬ್ಬರನ್ನು ಆಡಿಸುವ ಬದಲು ಭಾರತ ಈ ಪ್ರಕ್ರಿಯೆಯನ್ನು ಅನುಸರಿಸಬೇಕು. ಸ್ಯಾಮ್ಸನ್‌ಗೆ ಇದು ಅನ್ಯಾಯವಾಗಿದೆ ಎಂದು ನನಗೆ ಅನಿಸುತ್ತದೆ,” ಎಂದು ಎಸ್ ಬದ್ರಿನಾಥ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
IND vs WI: ವೆಸ್ಟ್ ಇಂಡೀಸ್ ವಿರುದ್ಧದ ಒಡಿಐ, ಟಿ20ಐ ಸರಣಿಗಳಿಗೆ ಭಾರತ ತಂಡ ಪ್ರಕಟ!
ಇದೇ ವೇಳೆ, ಅಭಿಷೇಕ್ ಶರ್ಮಾ ಕೂಡ ತಂಡದ ಆರಂಭಿಕ ಸ್ಥಾನಕ್ಕೆ ತಾನು ಅರ್ಹ ಎಂಬುದನ್ನು ನಿರಂತರವಾಗಿ ಸಾಬೀತುಪಡಿಸುತ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 82 ರನ್ ಸಿಡಿಸಿದ ಅಭಿಷೇಕ್, ಏಳು ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಬಾರಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 157 ರನ್‌ಗಳ ಗುರಿಯನ್ನು ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು.
ಸಂಜು ಸ್ಯಾಮ್ಸನ್‌ಗೆ ದೀರ್ಘಾವಶಿ ಅವಕಾಶ ನೀಡಿ
ಮೊದಲನೇ ಪಂದ್ಯದಲ್ಲಿ ಕೇವಲ 10 ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ, ಸಂಜು ಸ್ಯಾಮ್ಸನ್, ಎರಡನೇ ಟಿ20ಐ ಪಂದ್ಯದಲ್ಲಿ 22 ಎಸೆತಗಳಲ್ಲಿ 57 ರನ್ ಸಿಡಿಸುವ ಮೂಲಕ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿದ್ದರು. 2026ರ ಐಸಿಸಿ ಟಿ20 ವಿಶ್ವಕಪ್ ಟೂರಿಯ ಬಳಿಕ ಸಂಜುಗೆ ಇದು ಮೊದಲ ಅರ್ಧಶತಕವಾಗಿದೆ. ಇದೀಗ ಅವರು ಅದ್ಭುತ ಲಯಕ್ಕೆ ಮರಳಿದ್ದು, ಮೂರನೇ ಪಂದ್ಯದಲ್ಲಿ ಹೇಗೆ ಆಡಲಿದ್ದಾರೆಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಏಷ್ಯನ್ ಗೇಮ್ಸ್‌ನಿಂದ ನಿತೀಶ್ ರೆಡ್ಡಿ ರಿಲೀಸ್
"ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ ಹಾಗೂ ಅವರು ಅರ್ಧಶತಕವನ್ನು ಬಾರಿಸಿದ್ದಾರೆ. ಈ ವರ್ಷದ ಕೊನೆಯವರೆಗೂ ಅವರು ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಬೇಕು. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಎರಡು ಮ್ಯಾಚ್ ವಿನ್ನಿಂಗ್ ಅರ್ಧಶತಕಗಳನ್ನು ಬಾರಿಸಿದ್ದರು. ಭಾರತ ತಂಡದಲ್ಲಿ ವೈಭವ್ ಸೂರ್ಯವಂಶಿ ಇದ್ದರೂ ಅವರಿಂದ ಇನ್ನೂ ಅಸಾಧರಣ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿಲ್ಲ. ಹಾಗಾಗಿ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಬಾರದು, ಅವರಿಗೆ ದೀರ್ಘಾವಧಿ ಅವಕಾಶ ನೀಡಬೇಕೆಂದು," ಎಂದು ಎಸ್ ಬದ್ರಿನಾಥ್ ಹೇಳಿದ್ದಾರೆ.