ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ25 ಸಿಕ್ಸರ್‌, 13 ಬೌಂಡರಿʼ: 91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸಿದ ಅಭಿಷೇಕ್‌ ಶರ್ಮಾ!

ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಇದೀಗ ಪಂಜಾಬ್‌ನ ಸ್ಥಳೀಯ ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸಿದ್ದಾರೆ. ಅವರು ಪಂಜಾಬ್‌ನ ಅಂತರ ಜಿಲ್ಲಾ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಕೇವಲ 91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು ಬರೋಬ್ಬರಿ 25 ಸಿಕ್ಸರ್‌ ಹಾಗೂ 15 ಬೌಂಡರಿಗಳನ್ನು ಬಾರಿಸಿದ್ದಾರೆ.

ಪಂಜಾಬ್‌ ಸ್ಥಳೀಯ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಅಭಿಷೇಕ್‌ ಶರ್ಮಾ.

ನವದೆಹಲಿ: ಇಂಗ್ಲೆಂಡ್‌ ಹಾಗೂ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡದ (Indian Cricket team) ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Shrama), ಇದೀಗ ಪಂಜಾಬ್‌ನ ಸ್ಥಳೀಯ ಪಂದ್ಯವೊಂದರಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸಿ ದ್ವಿಶತಕವನ್ನು ಬಾರಿಸಿದ್ದಾರೆ. ಅವರು ಆಡಿದ 91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸಿದ್ದಾರೆ. ಈ ಸ್ಪೋಟಕ ಇನಿಂಗ್ಸ್‌ನಲ್ಲಿ ಅವರು 25 ಸಿಕ್ಸರ್‌ ಹಾಗೂ 15 ಬೌಂಡರಿಗಳನ್ನು ಬಾರಿಸಿದ್ದಾರೆ. ಅವರು 256.04ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು ವಿಶೇಷವಾಗಿದೆ.

ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅಮೃತಸರ ಹಿರಿಯರ ತಂಡದ ಪರ ಈ ಇನಿಂಗ್ಸ್‌ ಆಡಿದ್ದಾರೆ. ಅವರು ತಾರ್ನ್‌ ತರಣ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಸ್ಫೋಟಕ ಇನಿಂಗ್ಸ್‌ ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಕಳಪೆ ಫಾರ್ಮ್ ಎದುರಿಸುತ್ತಿರುವ ಸಂದರ್ಭದಲ್ಲೇ ಅವರು ಈ ಅದ್ಭುತ ಪ್ರದರ್ಶನ ನೀಡಿರುವುದು ವಿಶೇಷವಾಗಿದೆ. ಅಭಿಷೇಕ್ ಅವರ ಭರ್ಜರಿ ಬ್ಯಾಟಿಂಗ್‌ಗೆ ಸಂಬಂಧಿಸಿದ ಸ್ಕೋರ್‌ಕಾರ್ಡ್ ಹಾಗೂ ಬ್ಯಾಟಿಂಗ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಭಾರತದ ಟಾಪ್‌ 5 ಬೌಲರ್‌ಗಳನ್ನು ಆರಿಸಿ ಅಶ್ವಿನ್‌ ಬಳಿ ಕ್ಷಮೆ ಕೇಳಿದ ಅರ್ಷದೀಪ್‌ ಸಿಂಗ್!

ಪ್ರಸಕ್ತ ವರ್ಷವನ್ನು ಐಸಿಸಿ ನಂ.1 ಬ್ಯಾಟ್ಸ್‌ಮನ್‌ ಆಗಿದ್ದ ಆರಂಭಿಸಿದ್ದ ಅಭಿಷೇಕ್‌ ಶರ್ಮಾ ಇತ್ತೀಚಿನ ಕಳಪೆ ಪಾರ್ಮ್‌ನಿಂದಾಗಿ ತಮ್ಮ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರು ಇದೀಗ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳಿಂದ ಅವರು ಕೇವಲ 11 ರನ್‌ಗಳಿಗೆ ಸೀಮಿತರಾಗಿದ್ದರು. ವೈಭವ್‌ ಸೂರ್ಯವಂಶಿ ಭಾರತ ತಂಡಕ್ಕೆ ಮರಳಿರುವ ಹೊತ್ತಿನಲ್ಲಿ ಅಭಿಷೇಕ್‌ ಶರ್ಮಾ ಅವರ ಈ ವೈಫಲ್ಯ ಅವರ ಸ್ಥಾನಕ್ಕೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ 131 ರನ್‌ಗಳನ್ನು ಮಾತ್ರ ಗಳಿಸಿದ್ದು, ಅವರ ಸರಾಸರಿ 26.ಕ್ಕೆ ಕುಸಿದಿತ್ತು. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ 49 ರನ್ ಗಳಿಸಿ 24.5 ಸರಾಸರಿಯನ್ನು ದಾಖಲಿಸಿದ್ದರು. ಇತ್ತೀಚಿನ 10 ಟಿ20 ಅಂತಾರಾಷ್ಟ್ರೀಯ ಇನಿಂಗ್ಸ್‌ಗಳಲ್ಲಿ ಅಭಿಷೇಕ್ ಶರ್ಮಾ ಕೇವಲ ಒಂದು ಅರ್ಧಶತಕ ಮಾತ್ರ ದಾಖಲಿಸಿರುವುದು, ಅವರ ಕಳಪೆ ಫಾರ್ಮ್‌ಗೆ ಸಾಕ್ಷಿಯಾಗಿದೆ.



ಔಟ್‌ ಆದ ಹಾದಿಯ ಬಗ್ಗೆ ಆತಂಕಕ್ಕೆ ಒಳಗಾಗಿರುವ ಅಭಿಷೇಕ್‌

ಅಭಿಷೇಕ್ ಶರ್ಮಾ ಗಳಿಸಿರುವ ರನ್‌ಗಳಿಗಿಂತ ಅವರು ಔಟಾಗುತ್ತಿರುವ ವಿಧಾನವೇ ಹೆಚ್ಚು ಆತಂಕ ಮೂಡಿಸಿದೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳಲ್ಲೂ ವೇಗಿ ಬ್ಲೆಸಿಂಗ್ ಮುಝಾರಾಬಾನಿಗೆ ಅಭಿಷೇಕ್‌ ಶರ್ಮಾ ವಿಕೆಟ್ ಒಪ್ಪಿಸಿದ್ದರು. ಮೊದಲ ಪಂದ್ಯದಲ್ಲಿ ಅಗಲ ಎಸೆತದಲ್ಲಿ ಅಜಾಗರೂಕವಾಗಿ ಬ್ಯಾಟ್ ಬೀಸಿದ ಅಭಿಷೇಕ್, ಚೆಂಡನ್ನು ಡೀಪ್ ಫೀಲ್ಡರ್ ಕೈಗೆ ಸುಲಭ ಕ್ಯಾಚ್ ನೀಡಿದರು.



ಎರಡನೇ ಪಂದ್ಯದಲ್ಲಿ ಎತ್ತರಕ್ಕೆ ಎದ್ದ ಎಸೆತವನ್ನು ಆಡಲು ಯತ್ನಿಸಿದ ಅವರು, ಬ್ಯಾಟ್‌ನ ಅಂಚಿಗೆ ತಾಗಿ ಚೆಂಡು ನೇರವಾಗಿ ಬ್ಯಾಕ್‌ವರ್ಡ್ ಪಾಯಿಂಟ್ ಫೀಲ್ಡರ್ ಕೈ ಸೇರಿತು. ಮೂರನೇ ಪಂದ್ಯದಲ್ಲಿ ಆಂಗಲ್‌ಗೆ ವಿರುದ್ಧವಾಗಿ ರೂಮ್‌ ಮಾಡಿಕೊಂಡು ಹೊಡೆಯಲು ಪ್ರಯತ್ನಿಸಿದ ವೇಳೆ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ವಿಕೆಟ್‌ಕೀಪರ್‌ಗೆ ಕ್ಯಾಚ್ ಕೊಟ್ಟಿದ್ದರು. ಔಟಾದ ಬಳಿಕ ಅಭಿಷೇಕ್ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದ್ದರು.